IND vs AUS FINAL | ರಣರೋಚಕ ಪಂದ್ಯದಲ್ಲಿ ಯಾರಿಗೆ ಒಲಿಯಲಿದೆ ವಿಶ್ವಕಪ್ ...!
ಸುದ್ದಿಒನ್ : ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿದ್ದ ಏಕದಿನ ವಿಶ್ವಕಪ್ 2023 ಅಂತಿಮ ಹಂತ ತಲುಪಿದೆ.
ಇನ್ನು ಕೆಲವೇ ಗಂಟೆಗಳಲ್ಲಿ ಅಹಮದಾಬಾದ್ ವಿಶ್ವ ಚಾಂಪಿಯನ್ ಪಟ್ಟ ನಿರ್ಧರಿಸುವ ಕದನಕ್ಕೆ ವೇದಿಕೆಯಾಗಲಿದೆ. 1 ಲಕ್ಷದ 30 ಸಾವಿರ ಅಭಿಮಾನಿಗಳು ಹಾಗೂ ಅತಿರಥ ಮಹಾರಥರ ಸಮ್ಮುಖದಲ್ಲಿ ನಡೆಯಲಿರುವ ಮೆಗಾ ಫೈನಲ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಹಣೆಬರಹ ನಿರ್ಧರಿಸಲಿವೆ.
ಸುದೀರ್ಘ ಅವಧಿಯ ನಂತರ ತವರು ನೆಲದಲ್ಲಿ ಪ್ರತಿಷ್ಠಿತ ಟೂರ್ನಿಗೆ ಮುತ್ತಿಕ್ಕಲು ಭಾರತ ತಂಡ ಒಂದೇ ಒಂದು ಹೆಜ್ಜೆ ದೂರದಲ್ಲಿದೆ. ಭಾರತ ಮತ್ತು ಕಪ್ ನಡುವಿನ ಏಕೈಕ ತಡೆಗೋಡೆ ಆಸ್ಟ್ರೇಲಿಯಾ. ಭಾರತ ಮೂರನೇ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ಆಸೀಸ್ ಆರನೇ ಬಾರಿಗೆ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಕಳೆದ ಎರಡು ಬಾರಿ ಸೆಮಿಫೈನಲ್‌ನಲ್ಲಿ ಸೋತು ಕಪ್‌ನಿಂದ ವಂಚಿತವಾಗಿದ್ದ ಭಾರತ ಈ ಬಾರಿ ಗೆಲ್ಲಲೇಬೇಕೆಂದು ನಿರ್ಧರಿಸಿದೆ.
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಹೊಂದಿರುವ ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಸಿರಾಜ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಸಿದ್ಧರಾಗಿದ್ದಾರೆ. ಅಷ್ಟೇ ಬಲಿಷ್ಠವಾದ ಆಸ್ಟ್ರೇಲಿಯಾವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ.
ಟೂರ್ನಿಯಲ್ಲಿ ಕಳಪೆ ಆರಂಭದ ಹೊರತಾಗಿಯೂ ಪುಟಿದೆದ್ದ ಆಸೀಸ್ ಸತತ 8 ಪಂದ್ಯಗಳನ್ನು ಗೆದ್ದುಕೊಂಡಿತು. ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮ್ಯಾಕ್ಸ್‌ವೆಲ್ ನಂತಹ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ತಂಡ ಹೊಂದಿದೆ. ನಾಯಕ ಕಮ್ಮಿನ್ಸ್, ಸ್ಟಾರ್ಕ್, ಹೇಜಲ್‌ವುಡ್ ಮತ್ತು ಝಂಪಾ ಅವರನ್ನೊಳಗೊಂಡ ಬೌಲಿಂಗ್ ಘಟಕ ಈ ಟೂರ್ನಿಯಲ್ಲಿ ಮಿಂಚಿದೆ.
ಅಹಮದಾಬಾದ್‌ನಲ್ಲಿ ಹವಾಮಾನ ಹೇಗಿದೆ ?
ಈ ಟೂರ್ನಿಯಲ್ಲಿ ಭಾರತ ಈ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಇಂದು ಅದೇ ಪಿಚ್ ನಲ್ಲಿ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಮಳೆಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಖಾಮುಖಿ : ಭಾರತ-ಆಸ್ಟ್ರೇಲಿಯಾ ತಂಡಗಳು ಇದುವರೆಗೆ ಏಕದಿನದಲ್ಲಿ 150 ಬಾರಿ ಮುಖಾಮುಖಿಯಾಗಿವೆ. ಭಾರತ 57 ಪಂದ್ಯಗಳನ್ನು ಗೆದ್ದಿದೆ.ಆಸ್ಟ್ರೇಲಿಯಾ 83 ಪಂದ್ಯಗಳನ್ನು ಗೆದ್ದಿದೆ. ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು 13 ಪಂದ್ಯಗಳನ್ನು ಆಡಿವೆ. ಭಾರತ 5 ಬಾರಿ ಮತ್ತು ಆಸ್ಟ್ರೇಲಿಯಾ 8 ಬಾರಿ ಗೆದ್ದಿವೆ.
ಟಾಸ್ ಗೆದ್ದರೆ : ಹಲವು ಬಾರಿ ಟಾಸ್ ಕ್ರಿಕೆಟ್ ನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಟೂರ್ನಿಯಲ್ಲೂ ಅದೇ ನಡೆದಿದೆ. ಫೈನಲ್ ಪಂದ್ಯ ನಡೆಯಲಿರುವ ಅಹಮದಾಬಾದ್ ನಲ್ಲಿ ನಾಲ್ಕು ಲೀಗ್ ಪಂದ್ಯಗಳ ಪೈಕಿ 3 ಬಾರಿ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ. ಪಾಕಿಸ್ತಾನದೊಂದಿಗಿನ ಹೋರಾಟದಲ್ಲಿ ಭಾರತವೂ ಚೇಸ್ ಮಾಡಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಹೊಂದಿದೆ. ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಎದುರಾಳಿಯ ಮುಂದೆ ಬೃಹತ್ ಗುರಿ ಇಟ್ಟುಕೊಂಡು ಜಯಭೇರಿ ಬಾರಿಸುತ್ತಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಅಚ್ಚರಿಪಡಬೇಕಿಲ್ಲ.
ಭಾರತ ತಂಡ :
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್,
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್,
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಮಧ್ಯಾಹ್ನ 2 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ.