ಹೆಚ್ಚಿದ ಬಿಸಿಲಿನ ತಾಪ : ಬಳ್ಳಾರಿಯಲ್ಲಿ 41° ಡಿಗ್ರಿ ಸೆಲ್ಸಿಯಸ್
ಬಳ್ಳಾರಿ: ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಇಲ್ಲದ ಕಾರಣ ಬೇಸಿಗೆ ಬಿಸಿಯನ್ನು ಜನರಿಗೆ ತಡೆಯಲಾಗುತ್ತಿಲ್ಲ. ಆರಂಭದಲ್ಲಿಯೇ ಬಿಸಿಲು ಜೋರಾಗಿತ್ತು. ಈಗ ದಿನಕಳೆದಂತೆ ಮತ್ತಷ್ಟು ಜಾಸ್ತಿಯಾಗಿದೆ. ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಬಳ್ಳಾರಿಯಲ್ಲಿ ಜನರ ಸ್ಥಿತಿ ಹೇಳತೀರದು.
ಬಳ್ಳಾರಿಯಲ್ಲಿ ಸದ್ಯಕ್ಕೆ 38° ರಿಂದ 41° ಸೆಲ್ಸಿಯಸ್ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಮಾರ್ಚ್ ಅಂತ್ಯಕ್ಕೆ ಹೆಚ್ಚಿನ ಬಿಸಿಲು ದಾಖಲಾಗಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಛತ್ರಿ, ಮುಖಕ್ಕೆ ಕವರ್ ಮಾಡಿಕೊಳ್ಳಲು ದುಪ್ಪಟ ಮೊರೆ ಹೋಗುತ್ತಿದ್ದಾರೆ. ಅದರ ಜೊತೆಗೆ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ.
ಬಿಸಿಲಿ ಹೆಚ್ಚಾಗುತ್ತಿರುವ ಕಾರಣ ಸಹಜವಾಗಿಯೇ ಕಾಯಿಲೆಗಳು ಕೂಎ ಹೆಚ್ಚಾಗುತ್ತಿದೆ. ಮಕ್ಕಳಲ್ಲಂತು ಬೆವರು ಸಾಲುಯಂತಹ ಚರ್ಮ ರೋಗ ಬೇರೆ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಬಿಸಿಲಿನ ತಾಪಕ್ಕೆ ಮಕ್ಕಳಿಗೆ, ವಯೋವೃದ್ಧರಿಗೆ ಡಿಹೈಡ್ರೇಷನ್ ಆಗುತ್ತಾ ಇದೆ. ಆರೋಗ್ಯ ಇಲಾಖೆಯಿಂದ ಈ ಸಂಬಂಧ ಈಗಾಗಲೇ ಸೂಚನೆ ನೀಡಿದ್ದು, ನೀರನ್ನು ಹೆಚ್ಚಾಗಿ ಕುಡಿಯುವಂತೆ ಹೇಳಿದ್ದಾರೆ. ಗ್ಲೂಕೋಸ್ ಸೇವನೆ ಮಾಡಬೇಕು, ಬೆಳಗ್ಗೆ ಹತ್ತು ಗಂಟೆಯ ಒಳಗೆ ಕೆಲಸ ಮುಗಿಸಿ, ಆದಷ್ಟು ನೆರಳಿನಲ್ಲಿಯೇ ಇರಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಬಿಸಿಲಿನ ಧಗೆಯ ಜೊತೆಗೆ ಲೋಕಸಭಾ ಚುನಾವಣೆಯ ಕಾವು ಕೂಡ ಜೋರಾಗಿದೆ. ರಾಜಕಾರಣಿಗಳು ನಡೆಸುವ ಪ್ರಚಾರ ಕಾರ್ಯದಲ್ಲೂ ಜನ ಈ ಬಿಸಿಲನ್ನು ಲೆಕ್ಕಿಸದೆ ತೊಡಗಿಸಿಕೊಳ್ಳುತ್ತಿದ್ದಾರೆ. ಸಾಧ್ಯವಾದಷ್ಟು ಬಿಸಿಲಿನಿಂದ ದೂರ ಇದ್ದು, ತಂಪು ಪಾನೀಯಗಳನ್ನು ಕುಡಿಯಿರಿ ಎಂದು ಆರೋಗ್ಯ ಇಲಾಖೆ ಹೇಳುತ್ತೆ. ಆದರೆ ತಂಪು ಪಾನೀಯಗಳ ದರವೂ ಗಗನಕ್ಕೇರಿದೆ.