ರಾಜ್ಯದಲ್ಲಿ ಕೊರೊನಾ ಹೆಚ್ಚಳ : ಹೊಸ ವರ್ಷಕ್ಕೆ ನಿರ್ಬಂಧ ಹೇರಲಾಗುತ್ತಾ..? ಸಚಿವರು ಹೇಳಿದ್ದೇನು..?
ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ JN1 ಕೊರೊನಾ ವೈರಸ್ ತಳಿ ಎಲ್ಲರನ್ನು ಆತಂಕಗೊಳಿಸಿದೆ. ದಿನೇ ದಿನೇ ಪ್ರಕರಣಗಳು ಕೂಡ ಹೆಚ್ಚಾಗುತ್ತಲೇ ಇವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಮುಂಜಾಗ್ರತ ಕ್ರಮಗಳನ್ನು ಫಾಲೋ ಮಾಡುವುದಕ್ಕೆ ಸೂಚನೆ ಕೂಡ ನೀಡಲಾಗಿದೆ. ಹೊಸ ವರ್ಷಾಚರಣೆ ಬೇರೆ ಹತ್ತಿರ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಬಹುದಾ ಎಂಬ ಪ್ರಶ್ನೆ ಕಾಡುತ್ತಿತ್ತು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
Jn1 ತಳಿಯ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಪ್ರಕಟವಾಗಿಲ್ಲ. ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಬಗ್ಗೆ ಈವರೆಗೂ ತೀರ್ಮಾನ ತೆಗೆದುಕೊಂಡಿಲ್ಲ. ಇಂದಿನ ಸಭೆಯಲ್ಲಿ ಸಮಿತಿಯ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸುತ್ತೇವೆ. ಜನ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಜಾರಿ ಮಾಡುತ್ತಿಲ್ಲ. ಆ ಮಟ್ಟಕ್ಕೆ ಭಯ ಪಡುವ ಅಗತ್ಯವಿಲ್ಲ. ಪಾಸಿಟಿವ್ ಬಂದವರನ್ನು ಐಸೋಲೇಟ್ ಮಾಡಲಾಗುತ್ತಿದೆ ಎಂದಿದ್ದಾರೆ.
ಕೋವಿಡ್ ಸಂಬಂಧ ರಚಿಸಲಾಗಿರುವ ಕ್ಯಾಬಿನೆಟ್ ಉಪಸಮಿತಿ ಸಭೆಯಲ್ಲಿ JN.1 ಪ್ರಕರಣಗಳು ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಉತ್ತಮ ಎಂಬುದು ನಮ್ಮ ಸಲಹೆ. ಇನ್ನು 60 ವರ್ಷ ಮೇಲ್ಪಟ್ಟವರು, ಇತರ ಕಾಯಿಲೆ ಹೊಂದಿದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.