ಕಡೆಗಳಿಗೆಯಲ್ಲಿ ಪ್ರಜ್ವಲ್ ಜರ್ಮನಿಯಿಂದ ಬೆಂಗಳೂರಿಗೆ ಬರುವುದು ರದ್ದು..!
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಸದ್ದಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ದಿಢೀರನೆ ಜರ್ಮನಿಗೆ ಹಾರಿದರು. ಇತ್ತ ಮಹಿಳೆಯ ಕಿಡ್ನ್ಯಾಪ್ ಕೇಸಿನಲ್ಲಿ ರೇವಣ್ಣ ಲಾಕ್ ಆದರು, ಜೈಲು ಪಾಲಾದರು. ಆದರೂ ಪ್ರಜ್ವಲ್ ರೇವಣ್ಣರ ದರ್ಶನ ಮಾತ್ರ ಆಗುತ್ತಿಲ್ಲ. ರೇವಣ್ಣ ಅವರಿಗೆ ಸದ್ಯ ಜಾಮೀನು ಸಿಕ್ಕಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತಂದೆಯ ರಿಲೀಸ್ ಬಳಿಕವಾದರೂ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಅದು ಕೂಡ ಸುಳ್ಳಾಗಿದೆ.
ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರಿಗೆ ಬರಬೇಕಿತ್ತು. ಟಿಕೆಟ್ ಕೂಡ ಬುಕ್ ಆಗಿತ್ತು. ಈ ಮಾಹಿತಿ ತಿಳಿದು ಎಸ್ಐಟಿ ಅಧಿಕಾರಿಗಳು ಸಹ ಏರ್ಪೋರ್ಟ್ ನಲ್ಲಿಯೇ ಕಾಯುತ್ತಿದ್ದರು. ಆದರೆ ಕೊನೆ ಕ್ಷಣದಲ್ಲಿ ಈ ಪ್ಲ್ಯಾನ್ ಕೂಡ ಕ್ಯಾನ್ಸಲ್ ಆಗಿದೆ. ಪ್ರಜ್ವಕ್ ರೇವಣ್ಣ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದೇ ಇಲ್ಲ. ವಿದೇಶದಲ್ಲಿದ್ದುಕೊಂಡೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಪ್ರಜ್ವಲ್, ಎಸ್ಐಟಿ ಅಧಿಕಾರಿಗಳಿಗೇನೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಈಗಾಗಲೇ ಒಂದು ಸಲ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಮಾಡಿದ್ದಾರೆ. ಜರ್ಮನಿಯಿಂದ ಬರುತ್ತಿದ್ದ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಹೆಸರಲ್ಲಿ ಟಿಕೆಟ್ ಬುಕ್ ಆಗಿತ್ತು. ಆದರೆ ಆ ಟಿಕೆಟ್ ಕೂಡ ರದ್ದಾಗಿದೆ. ವಿದೇಶದಲ್ಲಿಯೇ ವಕೀಲರ ಜೊತೆಗೆ ಪ್ರಜ್ವಲ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ವಕೀಲರು ಪ್ರಜ್ವಲ್ ಗೆ ಅರ್ಥ ಮಾಡಿಸುತ್ತಿದ್ದು, ವಕೀಲರು ಹೇಳಿದ ಬಳಿಕವಷ್ಟೇ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಧ್ಯತೆ ಇದೆ. ಈಗ ಪ್ರಜ್ವಲ್ ಬೆಂಗಳೂರಿಗೆ ಬಂದರು, ಮೊದಲು ಎಸ್ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ.