Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದೆಹಲಿ ಮದ್ಯ ಪ್ರಕರಣದಲ್ಲಿ ಅರೆಸ್ಟ್ ಆಗ್ತಾರಾ ಅರವಿಂದ್ ಕೇಜ್ರಿವಾಲ್ ?

02:08 PM Jan 03, 2024 IST | suddionenews
Advertisement

 

Advertisement

ಸುದ್ದಿಒನ್ : ದೆಹಲಿ ಮದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮೂರನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ. ದೆಹಲಿ ಮದ್ಯ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೀಡಿದ ನೋಟಿಸ್‌ಗೆ ಕ್ಯಾರೆ ಎನ್ನದ ಕೇಜ್ರಿವಾಲ್, ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಇಡಿಗೆ ಪತ್ರ ಬರೆದಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ. ಈಗಾಗಲೇ ಎರಡು ಬಾರಿ ಹಾಜರಾಗುವಂತೆ ಇಡಿ ನೀಡಿದ ನೋಟಿಸ್‌ಗಳನ್ನು ನಿರ್ಲಕ್ಷಿಸಿರುವ ಅರವಿಂದ್ ಕೇಜ್ರಿವಾಲ್ ಇದೀಗ ಮೂರನೇ ಬಾರಿಗೆ ಹಾಜರಾಗಲು ನಿರಾಕರಿಸಿದ್ದಾರೆ. ಇದರಿಂದಾಗಿ ದೆಹಲಿ ಮದ್ಯ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನವಾಗುತ್ತಾರೆಂಬ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.

ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಮುಂದೆ ಹಾಜರಾಗುವಂತೆ ಇಡಿ ಅಧಿಕಾರಿಗಳು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಆ ನೋಟಿಸ್‌ಗಳು ಕಾನೂನಿಗೆ ವಿರುದ್ಧವಾಗಿವೆ. ಈ ಕಾರಣದಿಂದಾಗಿ ಇಡಿ ತನಿಖೆಗೆ ಕೇಜ್ರಿವಾಲ್ ಹಾಜರಾಗುತ್ತಿಲ್ಲ ಎಂದು ಎಎಪಿ ಹೇಳುತ್ತಿದೆ.   ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಇಡಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುವುದು ಕೇಂದ್ರದ ಏಕೈಕ ಉದ್ದೇಶವಾಗಿದೆ ಎಂದು ಎಎಪಿ ಹೇಳಿದೆ.

Advertisement

ದೆಹಲಿ ಮದ್ಯ ಪ್ರಕರಣದ ತನಿಖೆಯ ಭಾಗವಾಗಿ ಇಡಿ ತನಿಖೆಗೆ ಕೇಜ್ರಿವಾಲ್ ಸಹಕರಿಸಲು ಸಿದ್ಧ ಎಂದು ಆಮ್ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ. ಲೋಕಸಭೆ ಚುನಾವಣೆ ನಡೆಯಲಿರುವಾಗ ಈಗಲೇ ಏಕೆ ನೋಟಿಸ್ ಕಳುಹಿಸಲಾಗಿದೆ ಎಂದು ಎಎಪಿ ಪ್ರಶ್ನಿಸಿದೆ. ಲೋಕಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡದಂತೆ ತಡೆಯುವ ಪ್ರಯತ್ನದ ಭಾಗವಾಗಿ ಇಡಿ ನೋಟಿಸ್ ಕಳುಹಿಸಿದೆ ಎಂದು ಎಎಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರನ್ನು ಬಂಧಿಸುವ ಉದ್ದೇಶದಿಂದ ಈ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಎಎಪಿ ಆರೋಪಿಸಿದೆ.

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಇಡಿ ಕಳೆದ ವರ್ಷ ನವೆಂಬರ್ 2 ಮತ್ತು ಡಿಸೆಂಬರ್ 21 ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ಈ ವಿಚಾರಣೆಗೆ ಹಾಜರಾಗಿರಲಿಲ್ಲ. ಇಡಿ ಅಧಿಕಾರಿಗಳು ಎರಡು ಬಾರಿ ನೋಟಿಸ್ ನೀಡಿದರೂ ಕೇಜ್ರಿವಾಲ್ ತನಿಖೆಗೆ ಗೈರು ಹಾಜರಾಗಿದ್ದರು. ಇತ್ತೀಚೆಗಷ್ಟೇ ಮತ್ತೆ ನೋಟಿಸ್ ಜಾರಿ ಮಾಡಿದರೂ ಹಾಜರಾಗುತ್ತಿಲ್ಲ ಎನ್ನಲಾಗಿದೆ. ಆದರೆ, ಇಡಿ ನೋಟೀಸ್ ಕಾನೂನಿಗೆ ವಿರುದ್ಧವಾಗಿದೆ ಎಂದು ಎಎಪಿ ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.

ಈ ಮದ್ಯ ಹಗರಣ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಈಗಾಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ತನಿಖೆ ಮಾಡಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಇಡಿ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿತ್ತು. ಇದೇ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಇಡಿ ಬಂಧಿಸಿತ್ತು. ಮತ್ತೊಬ್ಬ ಎಎಪಿ ನಾಯಕ ಮತ್ತು ಸಂಸದ ಸಂಜಯ್ ಸಿಂಗ್ ಅವರನ್ನೂ ಬಂಧಿಸಿ ಜೈಲಿಗೆ ಕರೆದೊಯ್ಯಲಾಯಿತು.

ಮೂರು ನೋಟಿಸ್‌ಗಳ ಹೊರತಾಗಿಯೂ ಕೇಜ್ರಿವಾಲ್ ಗೈರುಹಾಜರಾಗಿರುವ ಕಾರಣ, ಇಡಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಜಾಮೀನು ರಹಿತ ವಾರೆಂಟ್ ಕೋರಿದೆ ಮತ್ತು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಜಾಮೀನು ರಹಿತ ವಾರೆಂಟ್ ಅನ್ನು ಅನುಸರಿಸಲು ವಿಫಲವಾದರೆ ಬಂಧನ ಮತ್ತು ನಂತರದ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ.

Advertisement
Tags :
arrestedarvind kejriwalDelhi liquor caseNewdelhisuddioneಅರವಿಂದ್ ಕೇಜ್ರಿವಾಲ್ಅರೆಸ್ಟ್ದೆಹಲಿನವದೆಹಲಿಮದ್ಯ ಪ್ರಕರಣಸುದ್ದಿಒನ್
Advertisement
Next Article