ಶಾಮನೂರು ಬಿಜೆಪಿಗೆ ಹೋಗಿದ್ದರೆ ಇಷ್ಟೊತ್ತಿಗೆ ಕೇಂದ್ರ ಮಂತ್ರಿ ಆಗಿರುತ್ತಿದ್ದರು : ಹೆಚ್ ಡಿ ರೇವಣ್ಣ
ಹಾಸನ: ಮೊದಲೇ ರಾಜ್ಯ ರಾಜಕೀಯದಲ್ಲಿ ಲಿಂಗಾಯತರಿಗೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಮಾತು ಚರ್ಚೆಗೆ ಗ್ರಾಸವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ತಮ್ಮ ಸರ್ಕಾರದಲ್ಲಿ ಎಷ್ಟೆಲ್ಲಾ ಸ್ಥಾನಮಾನ ಕೊಟ್ಟಿದ್ದೇವೆ ಎಂಬುದನ್ನು ದಾಖಲೆ ಸಮೇತ ಇಟ್ಟಿದ್ದಾರೆ. ಆದರೆ ಇದರ ನಡುವೆ ವಿಪಕ್ಷಗಳು ಶಾಮನೂರು ಮಾತಿಗೆ ಬಲ ನೀಡುತ್ತಿದ್ದಾರೆ.
ಇಂದು ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಿದ ಹೆಚ್ ಡಿ ರೇವಣ್ಣ, ಶಾಮನೂರು ಶಿವಶಂಕರಪ್ಪ ಬಿಜೆಪಿಯಲ್ಲಿ ಇದ್ದಿದ್ದರೆ ಇಷ್ಟೊತ್ತಿಗೆ ಕೇಂದ್ರದ ಮಂತ್ರಿಯಾಗುತ್ತಿದ್ದರು ಎಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿದೆ ಎಂದು ಹೇಳಿರುವ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಸರಿಯಾಗಿಯೇ ಇದೆ ಎಂದು ಬೆಂಬಲ ಸೂಚಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಇವರ ಯೋಗ್ಯತೆಗೆ ಒಬ್ಬೆ ಒಬ್ಬ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಹಾಕಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಈಗ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಬಂದಿದೆ. 60 ವರ್ಷ ಅವರಿಂದ ವೋಟ್ ಹಾಕಿಸಿಕೊಂಡಿದ್ದೀರಿ. ಈಗ ಅವರ ಸೇವೆ ಮಾಡಿ. ರಾಜ್ಯದಲ್ಲಿ ಒಂದು ತಿಂಗಳಿನಿಂದ ಅಲ್ಪಸಂಖ್ಯಾತರ ಬಗ್ಗೆ ಕರುಣೆ ತೋರಿಸುತ್ತಿದೆ. ಈ ದೇಶದಲ್ಲಿ ದೇವೇಗೌಡರು ಸಿಎಂ ಆಗೊವರೆಗೆ ಅಲ್ಪಸಂಖ್ಯಾ ತರಿಗೆ ಮೀಸಲಾತಿ ಕೊಟ್ಟಿರಲಿಲ್ಲ. ದೇವೇಗೌಡರು ಸಿಎಂ ಆದ ಬಳಿಕ ಅವರಿಗೆ ಮೀಸಲಾತಿ ಕೊಟ್ಟರು. ಇವರು 60 ವರ್ಷ ಏನು ಮಾಡ್ತಾ ಇದ್ದರು ಸ್ವಾಮಿ. ದೇವೇಗೌಡರು ಕಾಂಗ್ರೆಸ್ ಮಾಡದ ಕೆಲಸವನ್ನು ಮಾಡಿದರು. ಮುಸ್ಲಿಮರಿಗೆ 4 % ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಇವರು ಅಲ್ಪಸಂಖ್ಯಾತರ ಓಟ್ ಇಟ್ಟುಕೊಳ್ಳಲು ಮಾತ್ರ ಪ್ರಯತ್ನ ಮಾಡ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.