ಆಂಬ್ಯುಲೆನ್ಸ್ ಬಂದಿದ್ದರೆ ನಟಿ ಪವಿತ್ರಾ ಬದುಕುತ್ತಿದ್ದರೇನೋ..?
ಕನ್ನಡ ಹಾಗೂ ತೆಲುಗಿನ ಖ್ಯಾತ ನಟಿ ಪವಿತ್ರಾ ಜಯರಾಂ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರ ತೆಲುಗು ಇಂಡಸ್ಟ್ರಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ. ತ್ತಿಯನಿ ಧಾರಾವಾಹಿಯಲ್ಲಿ ತಿಲೋತ್ತಮನಾಗಿ ಎಲ್ಲರ ಗಮನ ಸೆಳೆದಿದ್ದರು. ಆದರೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅಪಘಾತವಾದಗ ಅವರ ಜೊತೆಗೆ ಇದ್ದ ಸಹ ನಟ ಚಂದುಗೌಡ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನಟಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ತೆಲುಗು ನಟ ಚಂದುಗೌಡ, ನಾವೂ ಬೆಂಗಳೂರಿನಿಂದ ಹೈದ್ರಬಾದ್ ಗೆ ಪ್ರಯಾಣ ಮಾಡುತ್ತಿದ್ದೆವು. ಮಧ್ಯಾಹ್ನ 2.30ರ ಸಮಯ ಅದು. ಭಾರೀ ಮಳೆ ಸುರಿಯುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ನಾವೂ ಕೂಡ ತುಂಬಾ ಸುಸ್ತಾಗಿದ್ದೆವು. ನಮಗು ನಿದ್ರೆ ಬರುತ್ತಿತ್ತು. ಕಾರಿನಲ್ಲಿ ಡ್ರೈವರ್, ಪವಿತ್ರಾ ಸಹೋದರಿಯ ಮಗಳು, ಪವಿತ್ರಾ ಹಾಗೂ ನಾನು ಪ್ರಯಾಣ ಮಾಡುತ್ತಿದ್ದೆವು. ನಾನು ಹಾಗೂ ಪವಿತ್ರಾ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು.
ನಮ್ಮ ಕಾರು 60 ಫೀಟ್ ರಸ್ತೆಯಲ್ಲಿ ಹೋಗುವಾಗ ಎದುರುಗಡೆ ಆರ್ಟಿಸಿ ಬಸ್ ಬಂದಿದೆ. ಈ ವೇಳೆ ಎದುರು ಬಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿಯಾಗಿತ್ತು. ತಕ್ಷಣ ಬ್ರೇಕ್ ಹಾಕಲಾಯ್ತು. ಆದರೆ ಕಾರು ಬಲಗಡೆಗೆ ವಾಲಿತ್ತು. ಇದರಿಂದ ಎದುರು ಬಂದ ಬಸ್ ನಮ್ಮ ಕಾರು ಡಿಕ್ಕಿ ಹೊಡೆಯಿತು. ಕಾರಿನಲ್ಲಿ ಇದ್ದವರಿಗೆ ಯಾರಿಗೆ ಏನು ಆಗಿಲ್ಲ. ನನಗೆ ಸ್ವಲ್ಪ ತಲೆ ಹಾಗೂ ಕೈಗರ ಗಾಯವಾಗಿದೆ. ಆದರೆ ಪವಿತ್ರಾ ಅಪಘಾತದ ರಭಸಕ್ಕೆ ಹೆದರಿದ್ದಳು. ಉಸಿರು ಕಟ್ಟಿದ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸಿದಳು. ಏನಾಯ್ತು.? ಏನಾಯ್ತು ..? ಎಂದು ಮಾತನಾಡುತ್ತಲೇ ಪ್ರಜ್ಞೆ ಕಳೆದುಕೊಂಡಳು. ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದೆವು. ಆದರೆ ಅದು ಬರಲು ಇಪ್ಪತ್ತು ನಿಮಿಷ ತಡವಾಗಿತ್ತು. ಆಂಬ್ಯುಲೆನ್ಸ್ ಬೇಗ ಬಂದಿದ್ದರೆ ಪವಿ ಉಳಿಯುತ್ತಿದ್ದಳೇನೋ ಎಂದು ಚಂದುಗೌಡ ಕಣ್ಣೀರು ಹಾಕಿದ್ದಾರೆ.
ಪವಿತ್ರಾ ಜಯರಾಂ ಅವರ ಅಂತ್ಯ ಕ್ರಿಯೆ ಇಂದು ಅವರ ಊರಾದ ಮಂಡ್ಯದ ಉಮ್ಮಡಹಳ್ಳಿಯಲ್ಲಿ ನಡೆಯಲಿದೆ. ಅಂತ್ಯ ಕ್ರಿಯೆಗೂ ಮುನ್ನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.