ಸಿಎಂ ಆಗಲು ಆಸೆ ಇದೆ.. ಕೆಪಿಸಿಸಿ ಅಧ್ಯಕ್ಷನಾಗುವ ಆಸೆಯೂ ಇದೆ : ಸತೀಶ್ ಜಾರಕಿಹೊಳಿ
ಹಾವೇರಿ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಚರ್ಚೆ ಆಗಾಗ ಜೋರಾಗಿ ಸುಮ್ಮನಾಗುತ್ತದೆ. ಕಾಂಗ್ರೆಸ್ ಒಳಗೆ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಸಿಎಂ ಹುದ್ದೆಗೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೂಡ ಆಗಾಗ ಕೇಳಿ ಬರುತ್ತದೆ. ಆಮೇಲೆ ಸುಮ್ಮನಾಗುತ್ತದೆ. ಇದೀಗ ಅವರೇ ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬಗ್ಗೆ ಮಾತನಾಡಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿಯಾಗಲು ಆಸೆ ಇದೆ. ಕೆಪಿಸಿಸಿ ಅಧ್ಯಕ್ಷನಾಗುವುದಕ್ಕೂ ಆಸೆ ಇದೆ. ಮಂತ್ರಿ ಆಗುವುದಕ್ಕೂ ಆಸೆ ಇದೆ. ಈ ಹಿಂದೆ ಕೂಡ ಸಿಎಂ ಆಗ್ತಾರೆ ಅಂತ ನನ್ನ ಹೆಸರು ಓಡಾಡ್ತಾ ಇತ್ತು. ಈಗ ಅಧ್ಯಕ್ಷ ಆಗ್ತಾರೆ ಅಂತ ಹೆಸರು ಓಡಾಡ್ತಾ ಇದೆ ಎಂದಿದ್ದಾರೆ.
ಇದೆಲ್ಲ ನಮ್ಮ ಉತ್ಸಾಹ ಅಷ್ಟೇ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡಬೇಕು. ನಾವೆಲ್ಲಾ ಕಾದು ನೋಡಬೇಕು. ಈ ವಿಚಾರವಾಗಿ ನಾನು ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಉಪಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ. ತೃಪ್ತಿ ಇದೆ. ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೇವೆ. ತೃಪ್ತಿ ಇದೆ. ಅಧ್ಯಕ್ಷರ ಹುದ್ದೆಯನ್ನು ಅಹಿಂದ ನಾಯಕರಿಗೆ ಕೊಡಬೇಕು ಎಂಬ ಒತ್ತಾಯವಿದೆ. ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡಬೇಕು. ಯಾರಿಗೆ ಕೊಡಬೇಕು..? ಯಾಕೆ ಕೊಡಬೇಕು..? ಅದರಿಂದಾಗುವ ಲಾಭವೇನು..? ಇದೆಲ್ಲವನ್ನು ಚರ್ಚಿಸಿ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ ಎಂದು ತಮಗೂ ಸಿಎಂ ಆಗುವ ಬಯಕೆ ಇದೆ ಎಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಬದಲಾಯಿಸಬೇಕೆಂಬ ಚರ್ಚೆಯಾಗುತ್ತಿದ್ದು, ಯಾರಿಗೆ ನೀಡ್ತಾರೆ ಎಂಬುದನ್ನು ನೋಡಬೇಕಿದೆ.