ಹಿಜಾಬ್ ಹಿಂದಕ್ಕೆ ಪಡೆಯುತ್ತೇನೆಂದು ಹೇಳಿಯೇ ಇಲ್ಲ : ಸಿಎಂ ಸಿದ್ದರಾಮಯ್ಯ
ಮೈಸೂರು: ರಾಜ್ಯದಲ್ಲಿ ಮತ್ತೆ ಹಿಜಾಬ್ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತಿಚೆಗಷ್ಟೇ ಹಿಜಾಬ್ ಮೇಲಿನ ನಿಷೇಧದ ಆದೇಶವನ್ನು ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪೊ ನಾಯಕರ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ನಾನು ಹಿಜಾಬ್ ಆದೇಶ ಹಿಂಪಡೆಯುತ್ತೇನೆ ಅಂತ ಹೇಳಿಯೇ ಇಲ್ಲ ಎಂದಿದ್ದಾರೆ.
ಹಿಜಾಬ್ ನಿಷೇಧದ ಆದೇಶ ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. ಯಾವ ಶೈಕ್ಷಣಿಕ ವರ್ಷದಿಂದ ಹಿಂಪಡೆಯಬೇಕು ಎಂಬುದರ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸುತ್ತೇನೆ. ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಿದ್ದೇವೆ ಅಂತಷ್ಟೇ ಹೇಳಿದ್ದು. ನಿಷೇಧ ಮಾಡಿರುವುದನ್ನು ಇನ್ನೂ ವಾಪಸ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಹಿಜಾಬ್ ಅನ್ನು ನಿಷೇಧ ಮಾಡಲಾಗಿತ್ತು. ಈ ವಿಚಾರ ಇಡೀ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕೋರ್ಟ್ ನಲ್ಲಿ ಕೇಸ್ ಕೂಡ ಇದೆ. ಸರ್ಕಾರದ ಆದೇಶವನ್ನೆ ಕೋರ್ಟ್ ಎತ್ತಿ ಹಿಡಿದಿದೆ. ಶಾಲಾ ಆವರಣ ಒಳಗೆ ಹಿಜಾಬ್ ಧರಿಸಿ ಹೋಗುವುದಕ್ಕೆ ಅನುಮತಿ ಇಲ್ಲ. ಹೀಗಾಗಿ ಹಲವು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಶಾಲೆಗೆ ಹೋಗದೆ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು, ಉಡುಗೆ ಅವರವರ ಇಷ್ಟ ಎಂದು ಹೇಳಿದ್ದು, ಚರ್ಚೆಗೆ ಗ್ರಾಸವಾಗಿದೆ. ಹಿಜಾಬ್ ಬಗ್ಗೆ ನೀಡಿದ ಹೇಳಿಕೆಗೆ ಬಾರೀ ಟೀಕೆ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಅವರ ಹೇಳಿಕೆಯನ್ನು ಇಂದು ಮತ್ತೊಮ್ಮೆ ಹೇಳಿ, ಸ್ಪಷ್ಟನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.