ನಾನು ಯಾವತ್ತು ಹೈಕಮಾಂಡ್ ಗೆ ಬ್ಲಾಕ್ ಮೇಲ್ ಮಾಡಿಲ್ಲ : ಡಿಕೆ ಶಿವಕುಮಾರ್
ಬೆಂಗಳೂರು: ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರಿಗೂ ಸಿಎಂ ಆಗಬೇಕೆಂಬ ಹಠವಿದೆ. ಆದರೆ ಈ ಬಾರಿಯೂ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದು, ಪೂರ್ಣ ಪ್ರಮಾಣದಲ್ಲಿ ಸಿಎಂ ಹುದ್ದೆ ನಿಭಾಯಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನನಗೆ ಗಾಂಧಿ ಕುಟುಂಬದ ಮೇಲೆ ಪ್ರೀತಿ ಇದೆ. ಆ ಕುಟುಂಬಕ್ಕೆ ನಾನು ಯಾವತ್ತಿಗೂ ಲಾಯಲ್ ಆಗಿದ್ದೇನೆ. ಒಂದು ದಿನ ಫಲ ಸಿಗಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಪಕ್ಷ ಸಂಘಟನೆ, ಪಕ್ಷ ಅಧಿಕಾರಕ್ಕೆ ತರುವುದಕ್ಕಾಗಿ ಅಷ್ಟೆಲ್ಲ ಶ್ರಮ ಪಟ್ಟರು ಸಿಎಂ ಮಾಡಲಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ನನಗೆ ನನ್ನ ಬಲ ಮತ್ತು ವೀಕ್ನೆಸ್ ಎರಡು ಗೊತ್ತಿದೆ. ನನ್ನ ಶಕ್ತಿಯಿಂದಲೇ, ಕೊಟ್ಟಿರುವ ಕೆಲಸ ಮಾಡಿ ಮುಗಿಸಿದ್ದೇನೆ. ನನ್ನ ವೀಕ್ನೆಸ್ ಏನು ಅಂದ್ರೆ ಹೈಕಮಾಂಡ್ ಗೆ ನಾನು ಯಾವತ್ತು ಬ್ಲಾಕ್ ಮೇಲ್ ಮಾಡಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಯಾವತ್ತೂ ಹೈಕಮಾಂಡ್ ವಿರುದ್ಧ ಹೋಗುವುದಿಲ್ಲ. ಸಿಎಂ ಸ್ಥಾನದ ವಿಚಾರದಲ್ಲಿ ನಾವೂ ಕೆಲವೊಂದು ಒಪ್ಪಂದದ ಮೇಲಿದ್ದೇವೆ. ಈಗ ಅದನ್ನ ಹೇಳುವುದಿಲ್ಲ. ಆ ದಿನ ಬರಲಿ ನೋಡೋಣಾ.
ಇದೆ ವೇಳೆ ಕೆಪಿಸಿಸಿ ಸ್ಥಾನದ ಮೇಲೆ ಹಲವರ ಕಣ್ಣು ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಸೆ ಇರುವುದು ತಪ್ಪಲ್ಲ. ಆದರೆ ಇಲ್ಲಿ ಯಾವುದೇ ಕುರ್ಚಿಯೂ ಖಾಲಿ ಇಲ್ಲ. ಹೈಕಮಾಂಡ್ ಮಾತ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ಮತ್ತು ಪಕ್ಷವನ್ನು ಯಾರೂ ಮುನ್ನಡೆಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.