ಬಿಜೆಪಿಯಲ್ಲಿ ಯಾರ್ಯಾರು, ಎಲ್ಲೆಲ್ಲಿ ಲೂಟಿ ಮಾಡಿ ಆಸ್ತಿ ಮಾಡಿದ್ದಾರೆ ಅಂತ ಗೊತ್ತು : ಶಾಸಕ ಯತ್ನಾಳ್
ವಿಜಯಪುರ: ಶಾಸಕ ಯತ್ನಾಳ್ ಆಗಾಗ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರರ ಮೇಲೆ ಕಿಡಿಕಾರುತ್ತಲೆ ಇರುತ್ತಾರೆ. ಇಂದು ಕೂಡ ಕೊರೊನಾ ವಿಚಾರಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಮೊದಲ ಅಲೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಈ ವೇಳೆ 40 ಸಾವಿರ ಕೋಟಿ ಅವ್ಯವಹಾರವಾಗಿದೆ. ನಮ್ಮ ಸರ್ಕಾರ ಇದ್ದರೇನು..? ಬೇರೆ ಸರ್ಕಾರವಿದ್ದರೇನು..? ಕಳ್ಳರು ಕಳ್ಳರೆ ಅಲ್ವಾ. ಯಡಿಯೂರಪ್ಪ ಸರ್ಕಾರವಿದ್ದಾಗ ಪ್ರತಿಯೊಬ್ಬ ರೋಗಿಗೆ 8 ರಿಂದ 10 ಲಕ್ಷ ಬಿಲ್ ಮಾಡಿದ್ದಾರೆ. ಬಿಜೆಪಿಯಲ್ಲಿ ಯಾರು ಯಾರು ಹಣ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆಂದು ಹೊರ ತೆಗೆಯುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಅವರು 45 ರೂಪಾಯಿ ಮಾಸ್ಕ್ ಗೆ 485 ರೂಪಾಯಿ ನಿಹದಿ ಪಡಿಸಿದ್ದರು. ಬೆಂಗಳೂರಿನಲ್ಲಿ ಹತ್ತು ಸಾವಿರ ಬೆಡ್ ಗಳನ್ನು ಬಾಡಿಗೆ ಪಡೆದಿದ್ದರು. ಇದರಲ್ಲಿ ಎಷ್ಟು ಸಾವಿರ ಕೋಟಿ ಕೊಳ್ಳೆ ಹೊಡೆದಿದ್ದೀರಿ. ವಿಧಾನಸೌಧದಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಗೆ ಈ ವಿಚಾರವನ್ನು ನೇರವಾಗಿ ಹೇಳಿರುವೆ. ನನಗೆ ಕೊರೊನಾ ಬಂದಾಗ ಮಣಿಪಾಲ್ ನಲ್ಲಿ 50-80 ಸಾವಿರ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿ ಕೊಡಬೇಕು ಎಂದು ಅಂದೇ ಪ್ರಶ್ನಿಸಿದೆ. ನಾನು ಮಾತನಾಡುವುದಕ್ಕೆ ನೋಟೀಸ್ ಕೊಡಲಿ, ಹೊರಗೆ ಹಾಕಲಿ. ಸತ್ಯ ಹೇಳಿದರೆ ಭಯ. ಇವರೆಲ್ಲರ ಬಣ್ಣ ಬಯಲು ಮಾಡುವೆ. ಎಲ್ಲರು ಕಳ್ಳರಾದರೆ ರಾಜ್ಯ, ದೇಸದವನ್ನು ಉಳಿಸುವುದು ಯಾರು..? ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ ಎಂದಿದ್ದಾರೆ.