ಷಡ್ಯಂತ್ರಕ್ಕೆಲ್ಲಾ ನಾನು ಹೆದರುವುದಿಲ್ಲ : ಸೂರಜ್ ಬಂಧನದ ಬಳಿಕ ರೇವಣ್ಣ ಪ್ರತಿಕ್ರಿಯೆ
ಅಸಹಜ ಲೈಂಗಿಕ ಕ್ರಿಯೆ ಆರೋಪದ ಮೇಲೆ ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಅವರ ಬಳಿ ಇದ್ದ ಮೊಬೈಲ್ ಸೀಜ್ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್.ಡಿ. ರೇವಣ್ಣ ಮಾತನಾಡಿದ್ದು, ಈ ರೀತಿಯ ಷಡ್ಯಂತ್ರಕ್ಕೆಲ್ಲ ನಾನು ಹೆದರುವುದಿಲ್ಲ ಎಂದಿದ್ದಾರೆ.
ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಾತನಾಡಿ, ನನಗೆ ದೇವರು ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಈ ಷಡ್ಯಂತ್ರಕ್ಕೆಲ್ಲ ಹೆದರಿ ಹೋಗಲ್ಲ. ಈ ಷಡ್ಯಂತ್ರ ಮಾಡುತ್ತಿರುವುದು ಯಾರೂ ಎಂಬುದು ಗೊತ್ತಿದೆ. ಅದನ್ನ ಈಗ ಹೇಳಲ್ಲ. ಇದನ್ನೆಲ್ಲಾ ಎದುರಿಸುತ್ತೇವೆ. ನಿನ್ನೆ ಸೂರಜ್ ಹೇಳಿಲ್ವಾ ಏನೇನೋ ನಡೆದಿದೆ ಎಂದು. ನಮ್ಮ ಕಡೆಯವರು ದೂರು ಕೊಡಲು ಹೋಗಿದ್ದು ನನಗೆ ಗೊತ್ತಿಲ್ಲ. ಏನೇನೋ ನಡೆಯುತ್ತಿದೆ ಎಂದು ರೇವಣ್ಣ ಹೇಳಿದ್ದಾರೆ.
ಈಗಾಗಲೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರೇವಣ್ಣ ಪುತ್ರ ಪ್ರಜ್ವಲ್ ಜೈಲಿನಲ್ಲಿದ್ದಾರೆ. ಈಗ ಸೂರಜ್ ರೇವಣ್ಣ ಕೂಡ ಅಸಹಜ ಲೈಂಗಿಕ ವಿಚಾರದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಕೇಳಿದಾಗ ಇಂಥವೆಲ್ಲಾ ನನ್ನ ಬಳಿ ಯಾಕೆ ಇದನ್ನು ಚರ್ಚೆ ಮಾಡುತ್ತೀರಿ ಎಂದು ಗರಂ ಆಗಿದ್ದರು. ಈಗ ಹೆಚ್ ಡಿ ರೇವಣ್ಣ ಅವರು ಇದೆಲ್ಲಾ ಷಡ್ಯಂತ್ರ ಅಂತ ಹೇಳಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸೂರಜ್ ರೇವಣ್ಣ ಕೂಡ ಜೆಡಿಎಸ್ ಕಾರ್ಯಕರ್ತನ ಮೇಲೆ ಪ್ರತಿದೂರು ನೀಡಿದ್ದಾರೆ. ಹೀಗಾಗಿ ದೂರು ನೀಡಿದ್ದು ತಡವಾಗಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.