ಸಿದ್ದರಾಮಯ್ಯ ಅವರು ಎಷ್ಟು ವರ್ಷ ಸಿಎಂ ಸ್ಥಾನದಲ್ಲಿ ಇರುತ್ತಾರೆ ? ಸತೀಶ್ ಜಾರಕಿಹೊಳಿ ಹೇಳಿದ್ದೇನು..?
ಮೈಸೂರು: ಮೂಡಾ ಹಗರಣ ತನಿಖೆಗೆ ಬಂದಾಗಿನಿಂದ ಸಿಎಂ ರಾಜೀನಾಮೆ ನೀಡಲಿ ಎಂದೇ ವಿಪಕ್ಷ ನಾಯಕರು ಪಟ್ಟು ಹಿಡಿದಿದ್ದರು. ಈಗ ವಿಪಕ್ಷದವರು ಸುಮ್ಮನಾಗಿದ್ದಾರೆ. ಆದರೆ ಪಕ್ಷದೊಳಗೆ ಸಿದ್ದರಾಮಯ್ಯ ಅವರ ರಾಜೀನಾಮೆ, ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಐದು ವರ್ಷ ಇರುತ್ತಾರೋ ಮೂರು ವರ್ಷ ಇರುತ್ತಾರೋ ಗೊತ್ತಿಲ್ಲ. ಆದರೆ ಸದ್ಯಕ್ಕೆ ಸಿಎಂ ಸ್ಥಾನ ಬದಲಾವಣೆಯ ಪ್ರಶ್ನೆ ಉದ್ಭವಿಸಿಲ್ಲ. ಸಿದ್ದರಾಮಯ್ಯ ಅವೆಉ ಎಷ್ಟು ವರ್ಷ ಸಿಎಂ ಆಗಿರುತ್ತಾರೆ ಎಂಬುದನ್ನು ಹೈಕಮಾಂಡ್ ಗೆ ಕೇಳಬೇಕು. ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳಾಗಿದ್ದು, ಅದರ ಬದಲಾವಣೆಯ ಚರ್ಚೆ ನಡೆದಿಲ್ಲ. ಪ್ರತಿಪಕ್ಷಗಳು, ಮಾಧ್ಯಮಗಳಷ್ಟೇ ಈ ಬಗ್ಗೆ ಸುದ್ದಿ ಮಾಡುತ್ತಿವೆ.
ಕಳೆದ ಐದು ವರ್ಷದಿಂದ ಎಲ್ಲರೂ ಸಿಎಂ ಆಗಬೇಕು ಅಂತಿದ್ದಾರೆ. ಸಿಎಂ ಆಗಲು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ನನ್ನ ಮಗಳು ಆಸೆ ಪಡುವುದರಲ್ಲಿ ತಪ್ಪೇನಿದೆ. ಸದ್ಯಕ್ಕೆ ಸಿಎಂ ಇದ್ದಾರೆ. ಸಿಎಂ ಬದಲಾವಣೆಯ ಚರ್ಚೆ ಸದ್ಯಕ್ಕೆ ನಮ್ಮ ಪಕ್ಷದಲ್ಲಿ ನಡೆದಿಲ್ಲ. ಅದನ್ನು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ ಅವರು ಓಡಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆ ತೆರೆ ಎಳೆದಿದ್ದಾರೆ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು ಕೂಡ ಚರ್ಚೆ ಹುಟ್ಟು ಹಾಕಿತ್ತು.