ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ರಿಲೀಫ್ : ಬಿಜೆಪಿ ನಾಯಕರು ಏನಂದ್ರು..?
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ರಿಲೀಫ್ ಸಿಕ್ಕಿದೆ. ಇದಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಕೇಸ್ ವಾಪಾಸ್ ತೆಗೆದುಕೊಳ್ಳುವ ನಿರ್ಧರವಾದಾಗಲೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಹೈಕೋರ್ಟ್ ನಿಂದ ರಿಲೀಫ್ ಸಿಕ್ಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ಜಾರಿ ನಿರ್ದೇಶನಾಲಯ ಪತ್ರ ಬರೆದಾಗ ಸಿಬಿಐ ತನಿಖೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮತಿ ಕೊಟ್ಟಿತ್ತು. ಆದರೆ ಇದನ್ನು ವಾಪಾಸ್ ಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಕಾನೂನು ಬಾಹಿರವಾಗಿತ್ತು. ಇದಕ್ಕೆ ನ್ಯಾಯಾಲಯದಲ್ಲಿ ಜಯ ಸಿಗಲಿಲ್ಲ. ಏನೇ ಪ್ರಯತ್ನ ಮಾಡಿದರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಅವರನ್ನು ಅಪರಾಧಿ ಎನ್ನುತ್ತಿಲ್ಲ. ಆದರೆ ತಪ್ಪು ಮಾಡಿಲ್ಲ ಎಂಬುದನ್ನು ಅವರು ನ್ಯಾಯಾಲಯದಲ್ಲಿಯೇ ಸಾಬೀತು ಮಾಡಲಿ ಎಂದು ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಇದೇ ವಿಚಾರವಾಗಿ ಯಡಿಯೂರಪ್ಪ ಅವರು ಕೂಡ ಮಾತನಾಡಿದ್ದು, ನಾವೇನು ಡಿಕೆ ಶಿವಕುಮಾರ್ ಅವರ ವಿರೋಧಿಗಳಲ್ಲ. ಕೋರ್ಟ್ ತೀರ್ಮಾನದ ಬಗ್ಗೆ ನಾವೇನು ಮಾತನಾಡಲ್ಲ ಎಂದಿದ್ದಾರೆ. ಇನ್ನು ಅಶ್ವತ್ಥ್ ನಾರಾಯಣ್ ಮಾತನಾಡಿ, ಕೋರ್ಟ್ ವಿಚಾರ ಆಗಿರುವ ಕಾರಣ ಏನನ್ನು ಹೇಳಲು ಆಗುವುದಿಲ್ಲ. ನ್ಯಾಯಾಲಯದ ನಿಲುವನ್ನು ಪ್ರಶ್ನೆ ಮಾಡಲು ಆಗುವುದಿಲ್ಲ ಎಂದಿದ್ದಾರೆ.