ಏಪ್ರಿಲ್ 17ರವರೆಗೂ ರಾಜ್ಯದ ಕೆಲವೆಡೆ ಜೋರು ಮಳೆ
ಬೆಂಗಳೂರು: ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಳೆ ಬಂದರೆ ಸಾಕು ಎನ್ನುತ್ತಿದ್ದಾರೆ. ಯುಗಾದಿ ಹಬ್ಬದ ಹಿಂದೆ ಮುಂದೆ ಮಳೆ ಬರುವುದು ವಾಡಿಕೆ. ಆದರೆ ಈ ವಾಡಿಕೆಯ ಮಳೆ ಕೆಲವೊಂದು ಕಡೆ ಬಂದಿದೆ. ಕೆಲವೊಂದು ಕಡೆ ಬರಬೇಕಿದೆ. ಇಂದಿನಿಂದ ಹಲವು ರಾಜ್ಯಗಳಲ್ಲಿ ಏಪ್ರಿಲ್ 17ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೂರು ದಿನ ಒಣಹವೆ ಮುಂದುವರೆಯಲಿದ್ದು, ಏಪ್ರಿಲ್ 15ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ರಾಮನಗರ, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆ ಇಲ್ಲದೆ ಕುಡಿಯುವ ನೀರಿಗೂ ಹಲವೆಡೆ ಹಾಹಾಕಾರ ಶುರುವಾಗಿದೆ. ಅಡಿಕೆ, ತೆಂಗು, ತರಕಾರಿಗೂ ನೀರಿಲ್ಲದೆ ರೈತ ಸಂಕಷ್ಟಕ್ಕೆ ಈಡಾಗಿದ್ದಾನೆ. ಉಷ್ಣಾಂಶ ಕೂಡ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮಳೆಗಾಗಿ ರೈತಾಪಿ ವರ್ಗ ಮಾತ್ರವಲ್ಲ ಸಾಮಾನ್ಯ ಜನರು ಕೂಡ ಕಾಯುತ್ತಿದ್ದಾರೆ.