ಬೆಂಗಳೂರಿನಲ್ಲಿ ಇಂದು ಜೋರು ಮಳೆ : ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ
ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಜನಕ್ಕೆ ಮಳೆಯ ಅನುಭವವಾಗಿತ್ತು. ಬಿಸ ಬಿಸಿಯಾಗಿದ್ದ ಭೂಮಿಗೆ ಮಳೆರಾಯ ತಂಪೆರೆದು ಹೋಗಿದ್ದ. ಮತ್ತೆ ನಿನ್ನೆಯೆಲ್ಲಾ ಅದೇ ಬಿಸಿಬಿಸಿ ಅನುಭವ. ಇದೀಗ ಇಂದು ಸಿಲಿಕಾನ್ ಸಿಟಿ ಮತ್ತೆ ತಂಪಾಗಿದೆ. ಸಂಜೆ ವೇಳೆಗೆ ಎಲ್ಲೆಲ್ಲೂ ಕೂಲ್ ಕೂಲ್ ಎನಿಸಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯಾಗಿದೆ.
ಜೋರು ಮಳೆಯಾದ ಕಾರಣ ದೇವನಹಳ್ಳಿಯ ಜನತೆ ಫುಲ್ ಖುಷಿಯಾಗಿದ್ದಾರೆ. ಆದರೆ ಸಡನ್ ಆಗಿ ಮಳೆ ಬಂದ ಕಾರಣ ವಾಹನ ಸವಾರರು ಕೊಂಚ ಗಲಿಬಿಲಿಯಾಗಿದ್ದಾರೆ. ಸಾಕಷ್ಟು ಜನ ಮಳೆಯಲ್ಲಿ ನೆನೆದು ತೊಪ್ಪೆಯಾಗಿದ್ದಾರೆ. ಇನ್ನು ಕೆಲವು ಕಡೆ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಏನಾದರೂ ಆಗಲಿ ಮಳೆ ಬಂತಲ್ಲ ಎಂಬುದೇ ಜನರಿಗೆ ಖುಷಿಯ ವಿಚಾರವಾಗಿದೆ.
ಸದ್ಯ ಮಳೆಗಾಲದ ಮುನ್ಸೂಚನೆ ಶುರುವಾಗಿದ್ದು, ಬೆಂಗಳೂರಿನಲ್ಲಿ ಮೇ 7, 8, 9 ಮತ್ತು 10ರ ತನಕವೂ ಮಳೆಯಾಗುವ ಸಾಧ್ಯತೆ ಇದೆ. ಗುಡುಗು, ಸಿಡಿಲಿನ ಸಮೇತ ಮಳೆಯಾಗುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿಯಲ್ಲಿ ಸದ್ಯ ಮೋಡ ಕವಿದ ವಾತಾವರಣವಿದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ಮೈಸೂರು, ಹುಣಸೂರು, ಕೊಡಗು, ಕೆ ಆರ್ ನಗರ, ಹಾಸನ, ಮಂಡ್ಯ ಜಿಲ್ಲೆಯಲ್ಲಿ ಎರಡು ಸೆಂಟಿ ಮೀಟರ್ ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಮೇ 7ರ ವರೆಗೆ ಉತ್ತರ ಒಳನಾಡುನಲ್ಲಿ ಬಿಸಿಗಾಳಿಯ ಅನುಭವವನ್ನೇ ಜನ ಅನುಭವಿಸಬೇಕಾಗಿದೆ. ದಕ್ಷಿಣ ಒಳನಾಡಿನಲ್ಲಿಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.