ಮುಂದಿನ 7 ದಿನಗಳ ಕಾಲ ಭರ್ಜರಿ ಮಳೆ : ಶಿವಮೊಗ್ಗ, ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಮುಂದುವರೆದಿದೆ. ರಾಜ್ಯದ ಹಲವೆಡೆ ಮಳೆರಾಯ ಬಿಟ್ಟು ಬಿಡದೆ ಕಾಡುತ್ತಿದ್ದಾನೆ. ರಾಜ್ಯದಲ್ಲಿ ಇನ್ನೂ 7 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಜೋರಾಗುವ ಕಾರಣ ಹಲವು ಜಿಲ್ಲೆಗಳಿಗೆ ರೆಡ್, ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜನರು ಕೂಡ ಎಚ್ಚರಿಕೆಯಿಂದ ಇರಬೇಕೆಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿಯಲ್ಲಿ ಕಳೆದ ಎರಡು ದಿನದಿಂದ ಮೋಡ ಕವಿದ ವಾತಾವರಣವಿದೆ. ಇಂದು ಮಧ್ಯಾಹ್ನವೇ ನಗರದ ಹಲವು ಭಾಗಗಳಲ್ಲಿ ಜೋರು ಮಳೆಯಾಗಿದೆ. ಮುಂದಿನ ಏಳು ದಿನಗಳ ಕಾಲ ಇಷ್ಟೇ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಮಳೆ ಜೋರಾದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಮನೆ ಕುಸಿತಗೊಂಡಿವೆ. ಎಷ್ಟೋ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೃಹತ್ ಮರಗಳು ಧರೆಗೆ ಉರುಳಿ ಅನಾಹುತ ಸೃಷ್ಟಿ ಮಾಡುವೆ. ನಿನ್ನೆಯಷ್ಟೇ ಸುರಿದ ಭಾರೀ ಮಳೆಗೆ ಮಂಗಳೂರಿನಲ್ಲಿ ಮನೆಯೊಂದು ಕುಸಿದು, ಮೂವರನ್ನು ಬಲಿ ಪಡೆದುಕೊಂಡಿದೆ. ಮಳೆಗಾಲವಾಗಿರುವ ಕಾರಣ ಎಷ್ಟೋ ಕಡೆ ಗುಡ್ಡ ಕುಸಿತವಾಗುತ್ತವೆ. ಪ್ರವಾಸಕ್ಕೆಂದು ಹೋಗುವವರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಗುಡ್ಡಗಾಡು ಪ್ರದೇಶಗಳ ಕಡೆಗೆ ಪ್ರಯಾಣಿಸುವಾಗ ಎಚ್ಚರದಿಂದ ಇರಿ.