ಶಿವಮೊಗ್ಗದ ಸುತ್ತಮುತ್ತ 2 ಗಂಟೆಗಳ ಕಾಲ ತಂಪೆರೆದ ಮಳೆರಾಯ
ಶಿವಮೊಗ್ಗ: ಈ ಬಾರಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಕಾರಣ ಬೇಸಿಗೆಗೂ ಮುನ್ನವೇ ಧಗೆ ಹೆಚ್ಚಾಗಿತ್ತು. ಸೂರ್ಯನ ಶಾಖಕ್ಕೆ ಭೂಮಿಯ ಉಷ್ಣಾಂಶ ಹೆಚ್ಚಾಗಿತ್ತು. ಹೀಗಾಗಿ ಜನ ಬೇಸಿಗೆ ಬಿಸಿಲಿನಿಂದ ನಾನಾ ಕಾಯಿಲೆಗಳಿಗೆ ತುತ್ತಾಗಿದ್ದರು. ಬಿಸಿಲಿನಿಂದ ಬಚಾವ್ ಆಗುವುದಕ್ಕೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದರು. ಬಿಸಿಲಿನ ತಾಪ ಸಹಿಸಲಾರದೆ ಮಳೆಯಾದರೂ ಬೇಗ ಬರಲಿ ಎಂದೇ ಬೇಡಿಕೊಳ್ಳುತ್ತಿದ್ದರು. ಆ ಮನವಿ ವರುಣರಾಯನಿಗೆ ಕೇಳಿಸಿದೆ.
ಯುಗಾದಿ ಸಮಯದಲ್ಲಿ ಹಲವೆಡೆ ಮಳೆ ಬಂದಿದೆ. ಇನ್ನು ಹಲವೆಡೆ ಇನ್ನು ಮಳೆ ಆಗುತ್ತಲೆ ಇದೆ. ಏಪ್ರಿಲ್ 12 ರಿಂದ 14ರವರೆಗೂ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಂದು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ, ಇನ್ನು ಹಲವೆಡೆ ಜೋರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಮಲೆನಾಡು ಭಾಗದ ಜನರಿಗೆ ಮಳೆರಾಯ ಜೋರಾಗಿಯೇ ತಂಪೆರೆದಿದ್ದಾನೆ. ದಾವಣಗೆರೆ, ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಶಿವಮೊಗ್ಗದ ಸುತ್ತಮುತ್ತ ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ವರ್ಷಧಾರೆ ಸುರಿದಿದೆ. ಬಿರು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು ಸುಮಾರು ಎರಡು ಗಂಟೆಗಳ ಕಾಲ ಸುರಿದ ವರುಣನ ಅಬ್ಬರದಿಂದ ಸಂತಸಗೊಂಡಿದ್ದಾರೆ.