ಬಾಳೆ ಬೆಲೆ ಭಾರೀ ಕುಸಿತ : ಬೆಳೆಗಾರ ಕಂಗಾಲು..!
ರೈತ ಸಾಲ ಸೋಲ ಮಾಡಿ, ಕಷ್ಟಪಟ್ಟು ವ್ಯವಸಾಯ ಮಾಡುತ್ತಾನೆ. ಬೆಳೆದ ಬೆಲೆಗೆ ಬೆಂಬಲ ಸಿಕ್ಕರೆ ಖುಷಿಯಾಗುತ್ತಾನೆ. ಸಾಲ ತೀರಿಸಿ ಮತ್ತೆ ಭೂಮಿ ಹದ ಮಾಡುವತ್ತ ಗಮನ ಹರಿಸುತ್ತಾನೆ. ಆದರೆ ಬೆಳೆದ ಬೆಲೆಗೆ ಬೆಂಬಲ ಬೆಲೆಯೇ ಸಿಗದೆ ಹೋದರೆ ಸಂಕಟ ಪಡುತ್ತಾನೆ. ಇದೀಗ ಇದ್ದಕ್ಕಿದ್ದ ಹಾಗೇ ಬಾಳೆ ಬೆಲೆ ಕುಸಿದಿದೆ. ಇದು ಬೆಳೆಗಾರನಿಗೆ ಕಣ್ಣೀರು ತರಿಸಿದೆ. ಮೂರು-ನಾಲ್ಕು ತಿಂಗಳು ಬಾಳೆಗಿದ್ದ ಬೆಲೆ ಇಗ ಇಲ್ಲ. ಏಲಕ್ಕಿ, ಪಚ್ಚೆ ಎರಡು ಕುಸಿದಿದೆ.
ಕೆಜಿ ಪಚ್ಚೆ ಬಾಳೆಯನ್ನು ಈಗ 10-15 ರೂಪಾಯಿಗೆ ಮಾರಾಟ ಮಾಡುವಂತಾಗಿದೆ. ಇದಕ್ಕೆ ಕಾರಣ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆಯನ್ನು ಬೆಳೆಯಲಾಗಿದೆ. ಅಷ್ಟೇ ಅಲ್ಲ ಹೊರ ರಾಜ್ಯಗಳಿಂದಾನೂ ಬಾಳೆ ರಾಜ್ಯದ ಮಾರುಕಟ್ಟೆಗ ಬರುತ್ತಿದೆ. ಆದ ಕಾರಣ ಬೆಲೆ ತೀರಾ ಕುಸಿದಿದೆ. ಕಡಿಮೆ ಖರ್ಚಿನಲ್ಲಿ ಒಳ್ಳೆಯ ಆದಾಯ ಮಾಡಬಹುದಾದಂತ ಬೆಳೆ ಬಾಳೆಯಾಗಿದೆ. ಆದರೆ ಹೀಗೆ ದಿಢೀರನೇ ಕುಸಿದಿರುವುದು ಬಾಳೆ ಬೆಳೆದಿರುವ ರೈತನನ್ನು ಸಂಕಷ್ಟಕ್ಕೆ ಈಡು ಮಾಡಿದೆ.
ರೈತರಿಂದ ನೇರವಾಗಿ ಖರೀದಿಸುವ ವ್ಯಾಪಾರಸ್ಥರು ತಮ್ಮ ಬಾಳೆ ಮಂಡಿಗಳಲ್ಲಿ ಕೆ.ಜಿ.ಗೆ 60ರಿಂದ 70 ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ತಳ್ಳುವ ಗಾಡಿ ವ್ಯಾಪಾರಸ್ಥರು, ಅಂಗಡಿಗಳಲ್ಲಿಯೂ ಇದೇ ದರದಲ್ಲಿ ಮಾರಾಟ ಆಗುತ್ತಿದೆ. ಒಂದು ಕೆ.ಜಿ ಬಾಳೆಗೆ ಕನಿಷ್ಟ 30ರಿಂದ 40 ರೂಪಾಯಿವರೆಗೆ ಲಾಭ ಪಡೆಯುತ್ತಿದ್ದಾರೆ. ವರ್ಷವಿಡೀ ಬಾಳೆ ಬೆಳೆದ ರೈತ ನಷ್ಟದಲ್ಲೇ ಬದುಕು ಸವೆಸುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಬಾಳೆ ಗೊನೆ ಬಿಡಲು 12 ತಿಂಗಳು ಬೇಕು. ಆದರೆ ಬೆಳೆದ ಬೆಳೆಗೆ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಮಾಡಿದ ಖರ್ಚು ಸಹ ಬಾರದಂತಾಗಿದೆ.