ಹೊಟ್ಟೆ ನೋವಿನ ಕಾರಣ ಹೇಳಿ ತನಿಖೆಗೆ ಸಹಕರಿಸಿಲ್ಲ : ಪ್ರಜ್ವಲ್ ರೇವಣ್ಣ ಮತ್ತೆ ಕಸ್ಟಡಿಗೆ
ಬೆಂಗಳೂರು: ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಕಳೆದೊಂದು ವಾರದಿಂದ ತನಿಖೆ ನಡೆಸುತ್ತಲೆ ಇದೆ. ಆದರೆ ಪ್ರಜ್ವಲ್ ರೇವಣ್ಣ ಮಾತ್ರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ. ಕೇವಲ ಹೊಟ್ಟೆ ನೋವಿನ ಕಾರಣವನ್ನಷ್ಟೇ ಹೇಳಿದ್ದಾರಂತೆ. ಇಂದು ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅಂತ್ಯವಾಗಿದೆ. ಹೀಗಾಗಿ ಇಂದು ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಎಸ್ಐಟಿ ಹೊಟ್ಟೆ ನೋವಿನ ವಿಚಾರವನ್ನು ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಎಸ್ಐಟಿ ಪರ ವಕೀಲರಾದ ಅಶೋಕ್ ನಾಯ್ಕ್ ಅವರು ಆರೋಪಿಯ ಕಸ್ಟಡಿಯನ್ನು ವಿಸ್ತರಿಸುವಂತೆ ತಿಳಿಸಿದ್ದರು. ಹೀಗಾಗಿ ಮತ್ತೆ ನಾಲ್ಕು ದಿನಗಳ ಕಾಲ ಪ್ರಜ್ವಲ್ ರೇವಣ್ಣ ಅವರ ಕಸ್ಟಡಿಯನ್ನು ವಿಸ್ತರಿಸಲಾಗಿದೆ.
ಇಂದು ವಿಚಾರಣೆ ವೇಳೆ ಕೋರ್ಟ್ ಪ್ರಜ್ವಲ್ ರೇವಣ್ಣ ಅವರಿಗೂ ಪ್ರಶ್ನೆ ಮಾಡಲಾಯ್ತು. ವಿಚಾರಣೆ ವೇಳೆ ಏನಾದರೂ ಸಮಸ್ಯೆ ಆಯ್ತಾ ಎಂದು ಪ್ರಶ್ನಿಸಿದಾಗ, ಪ್ರಜ್ವಲ್ ಇಲ್ಲ ಎಂದೇ ಹೇಳಿದ್ದಾರೆ. ಬಳಿಕ ಕೋರ್ಟ್ ಗೆ ಮನವಿ ಮಾಡಿಕೊಂಡ ವಕೀಲ ಅಶೋಕ್ ನಾಯ್ಕ್, ಆರೋಪಿ ತನಿಖೆಗೆ ಇನ್ನು ಯಾವುದೇ ರೀತಿಯ ಸಹಕಾರ ನೀಡಿಲ್ಲ. ಮೊಬೈ ಬಗ್ಗೆಯೂ ಉತ್ತರ ನೀಡಿಲ್ಲ. ಸಂತ್ರಸ್ತೆಯರ ಬಗ್ಗೆ ಕೇಳಿದ್ರೆ ಅವರ್ಯಾರನ್ನು ನಾನು ನೋಡಿಲ್ಲ ಅಂತಿದ್ದಾರೆ. ಹೀಗಾಗಿ ತನಿಖೆಯನ್ನು ಬೇರೆ ಆಯಾಮದಲ್ಲಿ ಮಾಡಬೇಕಿದೆ. ಇತರ ಆರೋಪಿಗಳ ಮುಂದೆ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಬೇಕಾಗಿದೆ. ಹೀಗಾಗಿ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಕಸ್ಟಡಿಗೆ ಕೋಡಬೇಕೆಂದು ಕೋರ್ಟ್ ಬಳಿ ಕೇಳಿಕೊಂಡಿದ್ದರು. ಅದರಂತೆ ಮತ್ತೆ ನಾಲ್ಕು ದಿನ ಕಸ್ಟಡಿಗೆ ನೀಡಿದೆ.