ಭಾಗ್ಯಲಕ್ಷ್ಮೀ ಯೋಜನೆ ರದ್ದಾಗಿದೆಯಾ..? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಬಿ ಎಸ್ ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಆ ಯೋಜನೆ ಏನಾಗಿದೆ ಎಂಬುದು ಹಲವರ ಪ್ರಶ್ನೆಯಾಗಿತ್ತು. ಅದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ನೀಡಿದ್ದಾರೆ. ಭಾಗ್ಯ ಲಕ್ಷ್ಮೀ ಯೋಜನೆಯನ್ನು ಯಾವುದೇ ಕಾರಣಕ್ಕೂ ತಡೆಹಿಡಿಯುವ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದೆ ಇಲ್ಲ. ಸಮೃದ್ಧಿ ಸುಕನ್ಯಾ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರೆಸುತ್ತಿದೆ ಎಂದಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ನಾಯಕ ಎನ್ ರವಿ ಕುಮಾರ್ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಆರ್ಥಿಕ ನೆರವಿನ ಮೂಲಕ ಸಬಲೀಕರಣಗೊಳಿಸಿ ಸ್ವಾವಲಂಬಿಯಾಗಿ ಮಾಡುವ ಯೋಜನೆ ಇದಾಗಿದೆ. 2006ನೇ ಸಾಲಿನಿಂದ ಈ ಯೋಜನೆ ಅನುಷ್ಠಾನದಲ್ಲಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಈ ಮೊದಲು ಹೆಣ್ಣು ಮಗು ಜನಿಸಿದರೆ ಬಾಂಡ್ ನೀಡಲಾಗುತ್ತಿತ್ತು. ಆದರೆ ಈಗ ಮಗುವಿನ ಹೆಸರಲ್ಲಿ ವಾರ್ಷಿಕ 3 ಸಾವಿರದಂತೆ ಹದಿನೈದು ವರ್ಷಗಳು ಸುಕನ್ಯಾ ಯೋಜನೆಯಡಿ ಇಡಲಾಗುತ್ತಿದೆ.
ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ವ ಮೊತ್ತವನ್ನು ನೀಡಲಾಗುವುದು. ಅಷ್ಟೇ ಅಲ್ಲ, 18 ವರ್ಷ ಪೂರ್ಣಗೊಂಡ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. 2006 ರಿಂದ 2024ವರೆಗೆ ಅಂದರೆ ಈವರೆಗೆ 23 ಲಕ್ಷದ 22 ಸಾವಿರದ 267 ಅರ್ಜಿಗಳು ಸುಕನ್ಯಾ ಸಮೃದ್ಧಿ- ಭಾಗ್ಯಲಕ್ಷ್ಮೀ ಯೋಜನೆಯಡಿ ಸ್ವೀಕೃತಗೊಂಡಿವೆ. ಕಳೆದ 9 ತಿಂಗಳಲ್ಲಿ 1 ಲಕ್ಷದ 12 ಸಾವಿರ ಅರ್ಜಿಗಳನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲಾಗಿದೆ. ಈವರೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕೃತಗೊಂಡಿವೆ ಎಂದಿದ್ದಾರೆ.