ಹನುಮ ಧ್ವಜ ವಿವಾದ : ತಾಲಿಬಾನ್ ಧ್ವಜ ಹಾರಿಸಲಾಗಿದೆ ಎಂದ ಸಿಟಿ ರವಿ ವಿರುದ್ಧ ದೂರು ದಾಖಲು..!
ಮಂಡ್ಯ: ಜಿಲ್ಲೆಯ ಕೆರಗೋಡುವಿನಲ್ಲಿ ಹನುಮ ಧ್ವಜ ವರ್ಷದ ವಾದ ಇತ್ಯರ್ಥವಾಗುವಂತೆ ಕಾಣುತ್ತಿಲ್ಲ. ದಿನೇ ದಿನೇ ಈ ವಿಚಾರ ಬಿಗಡಾಯಿಸುತ್ತಿದೆ. ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದಾರೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಹೋರಾಟಕ್ಕೆ ಸಾಥ್ ನೀಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಬಿಜೆಪಿ ನಾಯಕ ಸಿಟಿ ರವಿ ವಿರುದ್ದ ದೂರು ದಾಖಲಿಸಲಾಗಿದೆ.
ಸಿಟಿ ರವಿ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಮಳವಳ್ಳಿ ಕಾಂಗ್ರೆಸ್ ಶಾಸಕ ದೂರು ದಾಖಲಿಸಿದ್ದಾರೆ. ಮಂಡ್ಯದ ಎಸ್ಪಿಗೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರು ದೂರ ನೀಡಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ಹಿಂದಿ ಭಾಷೆಯಲ್ಲಿ ನೀಡಿದ್ದ ಹೇಳಿಕೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಹನುಮ ಧ್ವಜ ಇಳಿಸಿ ತಾಲಿಬಾನ್ ಧ್ವಜ ಹಾರಿಸಲಾಗಿದೆ ಎಂದು ಆ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ಮಂಡ್ಯ ಎಸ್ಪಿ ಯತೀಶ್ ಅವರಿಗೆ ಲಿಖಿತ ದೂರು ದಾಖಲಿಸಿದ್ದಾರೆ.
2018ರಲ್ಲಿ ನಾನು ಪಕ್ಷೇತರನಾಗಿ ಗೆದ್ದಿದ್ದೆ. ಆಗ ಸಿಟಿ ರವಿ ಕಾಲ್ ಮಾಡಿದ್ದ. ಎಷ್ಟು ಸಲ ಕಾಲ್ ಮಾಡಿದ್ದಾನೆ ಎಂಬುದು ನನಗೆ ಗೊತ್ತು. ನನ್ನನ್ನು ಕರೆದು ಸರ್ಕಾರ ರಚನೆ ಮಾಡುವುದಕ್ಕೆ ಮಾತನಾಡಿದ್ದರು. ಬಿಜೆಪಿ ಸರ್ಕಾರಕ್ಕೆ ಬೀಜ ಹಾಕಿದ್ದೆ ನಾನು. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ನಮ್ಮಿಂದ. ಇಲ್ಲಿ ಸೀಡ್ ಲೆಸ್ ಯಾರು ಅಂತ ಗೊತ್ತಾಗುತ್ತದೆ ಎಂದಿರುವ ನರೇಂದ್ರ ಸ್ವಾಮಿ, ಸಚಿವ ಸ್ಥಾನಕ್ಕಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಾರೆ ಎಂಬ ಸಿಟಿ ರವಿ ಮಾತಿಗೂ ತಿರುಗೇಟು ನೀಡಿದ್ದಾರೆ. ನಾವೂ ಏನು ಬೇಕಾದರೂ ಮಾಡಿಕೊಳ್ಳುತ್ತೀವಿ. ಅದು ನಿಮಗೇ ಯಾಕೆ..? ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಅವರ ಬಳಿ ಗುದ್ದಾಡುತ್ತೀವಿ ಅದೆಲ್ಲ ನಿಮಗ್ಯಾಕೆ ಎಂದಿದ್ದಾರೆ.