ಗುರುಪ್ರಸಾದ್ ಆತ್ಮಹತ್ಯೆ ತನಿಖೆ ಚುರುಕು : 3 ಕೋಟಿಗೂ ಅಧಿಕ ಸಾಲ ಮಾಡಿದ್ದ ನಿರ್ದೇಶಕ..!
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಕಾರಣ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅವರ ಪತ್ನಿ ಹೇಳಿಕೆ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನನ್ನ ಗಂಡ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ ಎಂದಿದ್ದಾರೆ. ಈ ಹಿನ್ನೆಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಗುರುಪ್ರಸಾದ್ ಬಳಸುತ್ತಿದ್ದ ಮೊಬೈಲ್, ಟ್ಯಾಬ್ ಅನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.
ನಿನ್ನೆ ಪೋಸ್ಟ್ ಮಾರ್ಟಮ್ ಆಗಿದ್ದು, ವರದಿಯಲ್ಲಿ ಉಸಿರುಗಟ್ಟಿ ಸಾವು ಎಂದು ಉಲ್ಲೇಖ ಮಾಡಲಾಗಿದೆ. ಗುರುಪ್ರಸಾದ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತರಯಾಗಿಲ್ಲ. ಬದಲಿಗೆ ಉಸಿರುಕಟ್ಟಿ ಸಾವು ಎಂದೇ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಅಕ್ಟೋಬರ್ 29ರ ರಾತ್ರಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಂದು ಕಂಠಪೂರ್ತಿ ಕುಡಿದು ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.
ಗುರುಪ್ರಸಾದ್ ಆತ್ಮಹತ್ಯೆಗೂ ಮುನ್ನ ಹೊಸ ಕರ್ಟನ್, ಹಗ್ಗವನ್ನು ತಂದಿದ್ದರಂತೆ. ಬಳಿಕ ಕಿಟಕಿಗಳನ್ನು ಕ್ಲೋಸ್ ಮಾಡಿ, ಕರ್ಟನ್ ಹಾಕಿ, ಅದರ ಮೇಲೆ ಬಟ್ಟೆ ಕಟ್ಟಿದ್ದರಂತೆ. ಹೀಗಾಗಿ 6 ದಿನವಾದರೂ ಹೆಣದ ವಾಸನೆ ಅಷ್ಟಾಗಿ ಹೊರಗೆ ಬಂದಿಲ್ಲ. ಮನೆಯಲ್ಲಿ ಎಲ್ಲಿಯೇ ಹುಡುಕಿದರೂ ಡೆತ್ ನೋಟ್ ಕೂಡ ಸಿಕ್ಕಿಲ್ಲ. ಗುರು ಪ್ರಸಾದ್ ಎರಡು ಮದುವೆಯಾಗಿದ್ದರು ಸಹ ಒಬ್ಬಂಟಿಯಾಗಿ ಬದುಕುತ್ತಿದ್ದರು. ಎರಡು ಮೊಬೈಲ್ ಗಳನ್ನು ಬಳಕೆ ಮಾಡುತ್ತಿದ್ದ ಗುರು ಪ್ರಸಾದ್ ಯಾವಾಗಲೂ ಪ್ಲೈಟ್ ಮೋಡ್ ನಲ್ಲಿ ಇಡುತ್ತಿದ್ದರು. ಮೊಬೈಲ್ ಆನ್ ಆದ್ರೆ ಸಾಲಗಾರರ ಕಾಟಕ್ಕೆ ಹೆದರುತ್ತಿದ್ದರು. ಮನೆಯ ವೈಫೈ ಬಳಕೆ ಮಾಡಿಯೇ ವಾಟ್ಸಾಪ್ ಬಳಕೆ ಮಾಡುತ್ತಿದ್ದರು. ಗುರು ಪ್ರಸಾದ್ ಮೂರು ಕೋಟಿಗೂ ಅಧಿಕ ಸಾಲ ಮಾಡಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಗುರುಪ್ರಸಾದ್ ಆತ್ಮಹತ್ಯೆಯ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.