ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು : 13 ಸಾವು
ಇಂಫಾಲ: ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ತೆಂಗ್ ನೌಪಾಲ್ ಜಿಲ್ಲೆಯಲ್ಲಿ ಗಲಭೆಕೋರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯ ಪ್ರದೇಶದಲ್ಲಿ ಸುಮಾರು 13 ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಸ್ಥಳಕ್ಕೆ ತಲುಪಿದ ಭದ್ರತಾ ಪಡೆಗಳು ಲೀಟು ಗ್ರಾಮದಲ್ಲಿ 13 ಮೃತ ದೇಹಗಳು ಕಂಡು ಬಂದಿವೆ. ಮೃತ ದೇಹಗಳ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ಲೀಟು ಪ್ರದೇಶದಲ್ಲಿ ಮೃತಪಟ್ಟವರು ಸ್ಥಳೀಯರಲ್ಲ.
ಅವರು ಬೇರೆ ಪ್ರದೇಶದಿಂದ ಬಂದು ಮತ್ತೊಂದು ಗುಂಪಿನೊಂದಿಗೆ ಗುಂಡಿನ ಚಕಮಕಿ ನಡೆಸಿರಬಹುದು. ಮೃತರ ವಿವರ ಇನ್ನೂ ತಿಳಿದುಬಂದಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ ತಿಂಗಳಿನಿಂದ ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿವೆ. ಮೈಟಿ ಮತ್ತು ಕುಕಿ ಬುಡಕಟ್ಟುಗಳ ನಡುವಿನ ಸಂಘರ್ಷವು ತೀವ್ರ ಹಂತವನ್ನು ತಲುಪಿತ್ತು. ಮೈತೇಯ್ ಬುಡಕಟ್ಟು ಜನಾಂಗದವರಿಗೆ ಬುಡಕಟ್ಟು ಸ್ಥಾನಮಾನ ನೀಡುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಗಲಭೆಗಳು ಪ್ರಾರಂಭವಾದವು.
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತು. ಆದರೆ ಇದೀಗ ಮತ್ತೆ ನಡೆದ ಗುಂಡಿನ ಚಕಮಕಿಯ ಘಟನೆ ಆತಂಕಕ್ಕೆ ಕಾರಣವಾಗಿದೆ.