ಚಿತ್ರದುರ್ಗ | ಭಾರೀ ಮಳೆಯಿಂದಾಗಿ ಸಂಕಷ್ಟದಲ್ಲಿರುವ ಶೇಂಗಾ ಬೆಳೆಗಾರರು..!
ಸುದ್ದಿಒನ್, ಚಿತ್ರದುರ್ಗ : ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಅವಾಂತರ ಒಂದಾ ಎರಡಾ. ಅದರಲ್ಲೂ ಹಲವು ಬೆಳೆಗಳ ರೈತರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಮಳೆ ಜಾಸ್ತಿಯಾಗಿರುವ ಪರಿಣಾಮ ಬೆಳೆ ಮಾರುಕಟ್ಟೆಗೆ ಬರದೆ ಕೊಳೆತು ಹೋಗುತ್ತಿದೆ. ಇದು ರೈತರಿಗೆ ದೊಡ್ಡಮಟ್ಟದ ನಷ್ಟವನ್ನೇ ಉಂಟು ಮಾಡಿದೆ. ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆಗಾರರ ಪಾಡು ಅಧೋಗತಿಗೆ ತಿರುಗಿದೆ.
ಜಿಲ್ಲೆಯಾದ್ಯಂತ ಒಂದು ಲಕ್ಷ ಹೆಕ್ಟೇರ್ ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಮಳೆ ಸುರಿಯುತ್ತಿರುವುದನ್ನು ನೋಡಿದರೆ ಶೇಕಡ 25 ರಿಂದ 30ರಷ್ಟು ಮಾತ್ರ ಬೆಳೆ ಮಾತ್ರ ಕೈಗೆ ಸಿಗುವ ಸಾಧ್ಯತೆ ಇದೆ. ಚಳ್ಳಕೆರೆಯಲ್ಲಿ 65 ಸಾವಿರ, ಹಿರಿಯೂರಿನಲ್ಲಿ 11 ಸಾವಿರ, ಮೊಳಕಾಲ್ಮೂರಿನಲ್ಲಿ 19 ಸಾವಿರ ಹೆಕ್ಟೇರ್ ನಲ್ಲಿ ಶೇಂಗಾವನ್ನು ಬಿತ್ತನೆ ಮಾಡಲಾಗಿದೆ. ಜೂನ್ ಜುಲೈನಲ್ಲಿ ಬಿತ್ತನೆಯಾಗಿದ್ದ ಶೇಂಗಾ ಆಗಸ್ಟ್ ನಲ್ಲಿ ಕಾಯಿಗಟ್ಟಬೇಕಿತ್ತು. ಆದರೆ ಆ ಸಮಯದಲ್ಲಿ ಮಳೆಯ ಕೊರತೆಯುಂಟಾಗಿ ಶೇಂಗಾ ಸರಿಯಾಗಿ ಬಂದಿಲ್ಲ.
ಆದರೆ ಆಗಸ್ಟ್ ಕೊನೆವಾರ, ಸೆಪ್ಟೆಂಬರ್ ನಲ್ಲಿ ಬಿತ್ತನೆಯಾದ ಕಾಯಿಗೆ ಮಳೆಯೇ ಅಡ್ಡಿಯಾಗಿದೆ. ರೋಗವೂ ಹರಡುತ್ತಿದೆ. ಕೊಳೆ ರೋಗ, ಬುಡ ರೋಗ, ಬೆಂಕಿ ರೋಗ ಅಂತ ಬೆಳೆಗೆ ಹಾನಿಯಾಗುತ್ತಿದೆ. ಕೃಷಿ ಇಲಾಖೆ ಹೇಳಿರುವ ಪ್ರಕಾರ 110 ಹೆಕ್ಟೇರ್ ಶೇಂಗಾ ಬೆಳೆ ನಾಶವಾಗಿದೆ ಎಂದಿದೆ. ಆದರೆ ಕೃಷಿ ಇಲಾಖೆ ನೀಡಿರುವುದು ಮಳೆಯಿಂದಾದ ಹಾನಿಯ ವರದಿ. ರೈತರಿಗೆ ಬೇರೆ ಬೇರೆ ಆಯಾಮಾಗಳಿಂದಾನೂ ಸಮಸ್ಯೆಯಾಗಿದೆ ಅದರ ಲೆಕ್ಕ ಅವರ ಬಳಿ ಇಲ್ಲ. ಏನೇ ಆಗಲಿ, ಕಳೆದ ವರ್ಷ ಬರದಿಂದ ಕಂಗೆಟ್ಟಿದ ರೈತ ಈ ವರ್ಷ ಹೆಚ್ಚು ಮಳೆಯಿಂದ ಕಂಗೆಡುವಂತೆ ಆಗಿದೆ.