ಉಪಚುನಾವಣೆ ಹೊತ್ತಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..!
ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಂದು ರಾಜ್ಯ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ. ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾದ ಮನೋಜ್ ಜೈನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯನಾಪನ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನ ಅಧಿಕಾರಿ ಹುದ್ದೆಯ ಸಮವರ್ತಿ ಉಸ್ತುವಾರಿಯಲ್ಲಿ ಇರಿಸಲಾಗಿದೆ.
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಬೆನ್ನಲ್ಲೇ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಐಎಎಸ್ ಆಫೀಸರ್ ರಮಣದೀಪ್ ಚೌಧರಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಬೆಂಗಳೂರಿನ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಸುಶಮಾ ಗೋಡಬೋಲೆ ಅವರನ್ನು ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇವರು ಈ ಮುಂಚೆ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾನ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನ ಅಧಿಕಾರಿಯಾಗಿದ್ದರು.
ಐಎಎಸ್ ಅಧಿಕಾರಿ ನಿತೇಶ್ ಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರ ಹುದ್ದೆಯ ಸಮವರ್ತಿ ಉಸ್ತುವಾರಿಯಲ್ಲಿ ಇರಿಸಲಾಗಿದೆ. ಈ ಮೊದಲು ಸೂಕ್ಷ್ಮ, ಸಣ್ಣ ಮತ್ತು ಉದ್ಯಮಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ನಿರ್ದೇಶಕರಾಗಿದ್ದರು. ಐಎಎಸ್ ಅಧಿಕಾರಿ ಬಸವರಾಜೇಂದ್ರ ಹೆಚ್ ಅವರನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಲೋಖಂಡೆ ಸ್ನೇಹಲ್ ಸುಧಾಕರ್ ಅವರನ್ನು ಕರ್ನಾಟಕ ವಿದ್ಯುತ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ಬಸವರಾಜು ಎ.ಬಿ ಅವರನ್ನು ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ಉಪಕಾರ್ಯದರ್ಶಿಯಾಗಿ ನೇಮಿಸಿದೆ. ರಂಗಪ್ಪ ಎಸ್ ಅವರನ್ನು ಬೆಂಗಳೂರಿನ ಹಣಕಾಸು ನೀತಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಿದೆ.