ಕೊಬ್ಬರಿ ಬೆಳೆಗಾರರಿಗೆ ಖುಷಿ ಸುದ್ದಿ : ಬೆಲೆಯಲ್ಲಿ ಹೆಚ್ಚಳ..!
ನವದೆಹಲಿ: ತೆಂಗು ಬೆಳೆಗಾರರಿಗೆ ಇದೀಗ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ಕೊಬ್ಬರಿಯ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ಶುಕ್ತವಾರ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಸಭೆಯ ಬಳಿಕ ಈ ಸಂಬಂಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್ ಗೆ 100 ರೂಪಾಯಿ ಹಾಗೂ ಹೋಳಾದ ಕೊಬ್ಬರಿಗೆ 422 ರೂಪಾಯಿ ಹೆಚ್ಚಿಸಲಾಗಿದೆ. ಕ್ವಿಂಟಲ್ ಉಂಡೆ ಕೊಬ್ಬರಿಗೆ 12,100 ರೂಪಾಯಿ ಹಾಗೂ ಹೋಳಾದ ಕೊಬ್ಬರಿಗೆ 11,582 ರೂಪಾಯಿ ಬೆಂಬಲ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸು ಅನ್ವಯ ಈ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ 855 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಶೇಕಡ 50 ರಷ್ಟು ಹೆಚ್ಚು ಎಂಎಸ್ಪಿ ನಿಗದಿಪಡಿಸಲಾಗಿದೆ. ಇಡೀ ದೇಶದ ಕೊಬ್ಬರಿ ಉತ್ಪಾದನೆ ಪೈಕಿ ಕರ್ನಾಟಕ ಪಾಲು ಶೇಕಡ 32.7ರಷ್ಟಿದೆ. ತಮಿಳುನಾಡು ಶೇಕಡ 25.7, ಕೇರಳ 25.4, ಆಂಧ್ರಪ್ರದೇಶ ಶೇಕಡ 7.7ರಷ್ಟು ಪಾಲು ಇದೆ.
2014ರಲ್ಲಿ ಮಿಲ್ಲಿಂಗ್ (ಹೋಳು) ಕೊಬ್ಬರಿ ಹಾಗೂ ಇಡಿ ಕೊಬ್ಬರಿ ಎಂಎಸ್ಪಿ ಕ್ವಿಂಟಾಲ್ ಗೆ ಕ್ರಮವಾಗಿ 5,250 ರೂಪಾಯಿ ಹಾಗೂ 5,500 ರೂಪಾಯಿ ಇತ್ತು. ಆದರೆ ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ 2025ನೇ ಅವಧಿಗೆ ಇದು ಶೇಕಡ 121 ಹಾಗೂ ಶೇಕಡ 120ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಿಬ್ಬರಿ ಬೆಲೆಯಲ್ಲಿ ಇಷ್ಟು ಏರಿಕೆಯಾಗಿದ್ದು ತೆಂಗು ಬೆಳೆಗಾರರಲ್ಲಿ ಸಂತಸ ತರಿಸಿದೆ. ಕೊಬ್ಬರಿಗೆ ಬೆಂಬಲ ಬೆಲೆ ಸಿಕ್ಕರೆ ರೈತರ ಕಷ್ಟಗಳು ಕಡಿಮೆಯಾಗುತ್ತದೆ.