ಗೌರಿ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಮೋಹನ್ ಗೆ ಜಾಮೀನು..!
ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೋಹನ್ ನಾಯಕ್ ಗೆ ಜಾಮೀನು ಸಿಕ್ಕಿದೆ. ಕರ್ನಾಟಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಜಸ್ಟೀಸ್ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠ ಜಾಮೀನು ಮಂಜೂರು ಮಾಡಿದೆ.
ಮೋಹನ್ ನಾಯಕ್ ಗೆ ಷರತ್ತು ಬದ್ಧ ಜಾಮೀನು ನೀಡಿದ್ದು, ಒಂದು ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ತನಿಖೆ ವೇಳೆ ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ. ಸಾಕ್ಷ್ಯಾಧಾರರಿಗೆ ಯಾವುದೇ ಬೆದರಿಕೆ ಹಾಕಬಾರದು ಎಂದು ಕೋರ್ಟ್ ತಿಳಿಸಿದೆ.
2017ರಲ್ಲಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಿತ್ತು. ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಗೌರಿ ಲಂಕೇಶ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ನಾಯಕ್ ನನ್ನು 2018ರ ಜುಲೈ 18ರಂದು ಬಂಧಿಸಲಾಗಿತ್ತು. ಅಂದಿನಿಂದಲೂ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ. ಬಳಿಕ ಜಾಮೀನು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಕೆ ಮಾಡಿದ್ದ. ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಮೋಹನ್ ನಾಯಕ್ ಗೆ ಜಾಮೀನು ಸಿಕ್ಕಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಮೊದಲ ಆರೋಪಿ ಮೋಹನ್ ನಾಯಕ್. ಇನ್ನುಳಿದವರು ಜೈಲಿನಲ್ಲಿಯೇ ಇದ್ದಾರೆ.
ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ 17 ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ 8,500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಒಟ್ಟು 527 ಸಾಕ್ಷಿಗಳಿದ್ದಾರೆ. ಪ್ರಕರಣದಲ್ಲಿ ಮೋಹನ್ ನಾಯಕ್ 11ನೇ ಆರೋಪಿಯಾಗಿದ್ದು, ಕೊಲೆಗೆ ಸಂಚು ರೂಪಿಸಿದ ಆರೋಪ ಆತನ ಮೇಲಿದೆ.