For the best experience, open
https://m.suddione.com
on your mobile browser.
Advertisement

ಸರ್ಕಾರಿ ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳಿಗೆ ಜಿ.ಪಂ ಸಿಒಇ ಎಸ್.ಜೆ.ಸೋಮಶೇಖರ್ ಡಿಢೀರ್ ಭೇಟಿ, ಪರಿಶೀಲನೆ

05:57 PM Dec 08, 2023 IST | suddionenews
ಸರ್ಕಾರಿ ವಿದ್ಯಾರ್ಥಿ ನಿಲಯ  ವಸತಿ ಶಾಲೆಗಳಿಗೆ ಜಿ ಪಂ ಸಿಒಇ ಎಸ್ ಜೆ ಸೋಮಶೇಖರ್ ಡಿಢೀರ್ ಭೇಟಿ  ಪರಿಶೀಲನೆ
Advertisement

ಚಿತ್ರದುರ್ಗ.ಡಿ.08:  ಸಮಾಜ ಕಲ್ಯಾಣ ಇಲಾಖೆ  ವ್ಯಾಪ್ತಿಯ ಜಿಲ್ಲೆಯ ವಿವಿಧಡೆ ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಮೀಪದ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಚಿತ್ರಹಳ್ಳಿಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಸಮುಚ್ಚಯದ ವಸತಿ ಶಾಲೆಗಳಿಗೆ ದಿಢೀರ್  ಭೇಟಿ ನೀಡಿ, ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಪರಿಶೀಲಿಸಿದರು.

ಚಿತ್ರದುರ್ಗ ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಮೀಪದ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿ ನಿಲಯದ ಅಡುಗೆ ಕೋಣೆ, ಡೈನಿಂಗ್ ಹಾಲ್, ಸ್ಟೋರ್ ರೂಂನಲ್ಲಿ ಶೇಖರಿಸಿಟ್ಟ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ವೀಕ್ಷಣೆ ಹಾಗೂ ಮೆನು ಚಾರ್ಟ್ ವೀಕ್ಷಿಸಿದ ಅವರು, ವಿದ್ಯಾರ್ಥಿ ನಿಲಯದಲ್ಲಿ ನೀಡುತ್ತಿರುವ ಸೌಲಭ್ಯಗಳು ಹಾಗೂ ಊಟದ ವ್ಯವಸ್ಥೆ ಪರಿಶೀಲನೆ ನಡೆಸಿದರು.

Advertisement

ಅಡುಗೆ ಪದಾರ್ಥ ಸಂಗ್ರಹ ಕೊಠಡಿಯಲ್ಲಿ ಫಿನಾಯಿಲ್ ಬಾಟಲ್‍ಗಳನ್ನು ಇರಿಸಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಕೂಡಲೆ ಫಿನಾಯಿಲ್ ಬಾಟಲ್‍ಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಿ, ಅಡುಗೆಗೆ ಬಳಸುವ ಪದಾರ್ಥಗಳನ್ನು ಸಂಗ್ರಹಿಸುವ ಕೊಠಡಿಗಳಲ್ಲಿ ಶೌಚಾಲಯ ಅಥವಾ ಸ್ನಾನಗೃಹಕ್ಕೆ ಬಳಸುವ ಸಾಮಗ್ರಿಗಳನ್ನು ದಾಸ್ತಾನು ಮಾಡದಂತೆ ಸೂಚನೆ ನೀಡಿದರು.

ಹಾಸ್ಟೆಲ್‍ನಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ, ಹಾಜರಿರುವ ವಿದ್ಯಾರ್ಥಿಗಳ ಸಂಖ್ಯೆ, ಕುಡಿಯುವ ನೀರಿನ ವಾಟರ್ ಫಿಲ್ಟರ್ ನಿರ್ವಹಣೆ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ಗ್ರಂಥಾಲಯ ಸೌಲಭ್ಯ, ಮೂಲಸೌಕರ್ಯಗಳ ಪರಿಶೀಲನೆ ನಡೆಸಿ, ಹಾಸ್ಟೆಲ್ ನಲ್ಲಿನ ನಿರ್ವಹಣೆ, ಸ್ವಚ್ಛತೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಪುಸ್ತಕಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಆಯಾ ವೃತ್ತಿಪರ ಕೋರ್ಸ್‍ಗಳಿಗೆ ಅನುಕೂಲವಾಗುವಂತಹ ಪುಸ್ತಕಗಳು ಹಾಗೂ ಪ್ರಮುಖ ಲೇಖಕರ ಅತ್ಯುತ್ತಮ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಓದಲು ಒದಗಿಸಬೇಕು ಎಂದು ಸೂಚಿಸಿದರು.

ಹಾಸ್ಟೆಲ್‍ಗಳಿಗೆ ಉತ್ತಮ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರಿನ ಘಟಕ, ಮಕ್ಕಳಿಗೆ ಕಾಟ್‍ಗಳು, ಸೋಲಾರ್ ವ್ಯವಸ್ಥೆ ಗಳನ್ನು ಕಂಪನಿಗಳ ಸಿಎಸ್‍ಆರ್ ನಿಧಿಯಡಿ ಕೈಗೊಳ್ಳಲು ಯತ್ನಿಸಲಾಗುವುದು ಎಂದರು.

ಮಕ್ಕಳ ದೂರು ಪುಸ್ತಕ ನಿರ್ವಹಣೆಗೆ ಸೂಚನೆ: ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳ ದೂರು ಪುಸ್ತಕ ನಿರ್ವಹಣೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು, ಅಲ್ಲದೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಲ್ಲೂ ತಪ್ಪದೆ ದೂರು ಪುಸ್ತಕ ನಿರ್ವಹಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ:  ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಬರುವ ಮಕ್ಕಳು ಸಾಮಾನ್ಯವಾಗಿ ಬಡವರ ಮನೆಯ ಮಕ್ಕಳಾಗಿರುತ್ತಾರೆ.  ಮನೆಯ ವಾತಾವರಣದಿಂದ ಸರ್ಕಾರಿ ಹಾಸ್ಟೆಲ್‍ಗಳಿಗೆ ಬಂದಿರುತ್ತಾರೆ.  ಹೀಗಾಗಿ ಹಾಸ್ಟೆಲ್‍ಗಳಲ್ಲಿನ ವಿದ್ಯಾರ್ಥಿಗಳನ್ನು ವಾರ್ಡನ್‍ಗಳು, ಸಿಬ್ಬಂದಿಗಳು ಕೂಡ ತಮ್ಮ ಮಕ್ಕಳಂತೆಯೇ ನೋಡಿಕೊಳ್ಳಬೇಕು ಎಂದು ಜಿ.ಪಂ ಸಿಇಒ ಸೋಮಶೇಖರ್ ನಿಲಯಪಾಲಕರಿಗೆ ಸೂಚನೆ ನೀಡಿದರು.

ಮಕ್ಕಳೊಂದಿಗೆ ಸಂವಾದ: ಚಿತ್ರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಮುಚ್ಚಯದ ವಸತಿ ಶಾಲೆಗಳಿಗೆ ಭೇಟಿ ನೀಡಿದ ಜಿ.ಪಂ ಸಿಇಒ, ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣ ಹಾಗೂ ವಸತಿ ಶಾಲೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು, ಅಲ್ಲದೆ ಮಕ್ಕಳ ಅನುಕೂಲಕ್ಕೆ ಹಾಸ್ಟೆಲ್‍ಗೆ ಇನ್ನು ಏನೇನು ಸವಲತ್ತು ನೀಡಬೇಕು ಎಂದು ಸಲಹೆಯನ್ನೂ ಕೂಡ ಕೇಳಿದರು.

ವಸತಿ ಶಾಲೆಯಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಯೇ, ಗುಣಮಟ್ಟದ, ಶುಚಿರುಚಿಯಾದ ಊಟ ನೀಡುತ್ತಾರೆಯೇ, ತಿಂಗಳಿಗೊಮ್ಮೆ ಸೋಪು, ಕೊಬ್ಬರಿಎಣ್ಣೆ, ಮತ್ತಿತರ ಸಾಮಗ್ರಿಯ ಕಿಟ್ ನೀಡುತ್ತಾರೆಯೇ ಎಂದು ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳು ವ್ಯಾಸಂಗದ ಕಡೆಗೆ ಹೆಚ್ಚಿನ ಗಮನ ನೀಡಬೇಕು.  ನಿಮಗಾಗಿ ಸರ್ಕಾರ ಹಣ ಖರ್ಚು ಮಾಡಿ ಓದಲು ವ್ಯವಸ್ಥೆ ಮಾಡಿದೆ, ಭವಿಷ್ಯದಲ್ಲಿ ನೀವು ಕೂಡ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು, ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಸ್ಟೆಲ್ ಊಟ ಸವಿದ ಸಿಇಒ : ಚಿತ್ರಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಿಇಒ ಸೋಮಶೇಖರ್ ಅವರು, ಹಾಸ್ಟೆಲ್‍ನಲ್ಲಿಯೇ ಮುದ್ದೆ, ಅನ್ನ ಸಾಂಬಾರ್, ಮಜ್ಜಿಗೆ ಊಟ ಸವಿದು, ಊಟದ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.  ಮಕ್ಕಳಿಗೆ ಎಲ್ಲ ಹಾಸ್ಟೆಲ್‍ಗಳಲ್ಲಿ ನಿಗದಿತ ಮೆನುವಿನಂತೆಯೇ ಊಟೋಪಹಾರ ತಯಾರಿಸಿ ನೀಡಬೇಕು, ತಾಜಾ ತರಕಾರಿಯನ್ನೇ ಬಳಸಬೇಕು, ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ನೀರು ಪರೀಕ್ಷೆಗೆ ಸೂಚನೆ: ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ಕುಡಿಯುವ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಿ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಹಾಗೂ ನಿಲಯ ಪಾಲಕರು, ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಇದ್ದರು.

Tags :
Advertisement