ನಿಖಿಲ್ ಸೋಲಿನ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಫಸ್ಟ್ ರಿಯಾಕ್ಷನ್..!
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿ ಯೋಗೀಶ್ವರ್ ಗೆದ್ದು ಬೀಗಿದ್ದಾರೆ. ನಿಖಿಲ್ ಮೂರನೇ ಬಾರಿಗೂ ಸೋಲು ಕಂಡಿದ್ದಾರೆ. ಒಂದು ಕಾಲದಲ್ಲಿ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಬದ್ಧ ವೈರಿಗಳಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಯಾವಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೋ ಅಂದಿನಿಂದಲೇ ದಳಪತಿ ವರ್ಸಸ್ ಅಂಬಿ ವೈಫ್ ಎಂಬಂತ ಯುದ್ಧ ಶುರುವಾಗಿತ್ತು. ಬಳಿಕ ಆಗಿದ್ದೆಲ್ಲವೂ ಹೊಂದಾಣಿಕೆ.
2024ರ ಲೋಕಸಭಾ ಚುನಾವಣೆಯಷ್ಟರಲ್ಲಿ ಸುಮಲತಾ ಬಿಜೆಪಿ ಸೇರ್ಪಡೆಯಾಗಿದ್ದರು. ಇದರಿಂದ ಮಂಡ್ಯ ಸ್ಪರ್ಧೆಗೆ ಟಿಕೆಟ್ ಸಿಗದೆ ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ಹೈಕಮಾಂಡ್ ಮಾತಿಗೆ ಹೂಗೊಟ್ಟು ಸುಮ್ಮನಾದ ಸುಮಲತಾ, ಪ್ರಚಾರಕ್ಕೆ ಹೋಗಿರಲಿಲ್ಲ. ಈ ಸಲ ನಡೆದ ಉಪಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಿಲ್ಲ. ಇದೀಗ ಶತ್ರುಗಳಾಗಿದ್ದವರು ಒಂದೇ ಪಕ್ಷದಲ್ಲಿದ್ದು, ನಿಖಿಲ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿಖಿಲ್ ಮೂರನೇ ಬಾರಿಗೆ ಸೋತ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ಉಪಚುನಾವಣೆ ಅಂತ ಬಂದಾಗ ರೂಲಿಂಗ್ ಪಾರ್ಟಿ ಗೆಲ್ಲೋದು ಸರ್ವೇ ಸಾಮಾನ್ಯ. ಇದನ್ನು ನೋಡುತ್ತಾ ಕೂಡ ಬಂದಿದ್ದೇವೆ. ಯಾವುದೇ ಪಾರ್ಟಿ ಇರಲಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಾನೇ ಹೋರಾಡುತ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ರಿಯಾಕ್ಷನ್ ಕೊಡಲು ಇಷ್ಟಪಡುವುದಿಲ್ಲ. ನಿಖಿಲ್ ಇನ್ನೂ ಯುವಕ, ಒಳ್ಳೆಯ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದು ಹಾರೈಸಿ ಸುಮ್ಮನಾಗಿದ್ದಾರೆ.
ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಬಿಜೆಪಿಯ ಎರಡು ಕ್ಷೇತ್ರವನ್ನು ಈಗ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಈಗ ಕಾಂಗ್ರೆಸ್ ಇನ್ನಷ್ಟು ಸ್ಟ್ರಾಂಗ್ ಆಗಿದೆ.