ಉದ್ದಿಮೆ ರೂಪದಲ್ಲಿ ಹೈನುಗಾರಿಕೆ ಕೈಗೊಳ್ಳಲು ರೈತರಿಗೆ ಆರ್.ರಜನೀಕಾಂತ ಸಲಹೆ
ಚಿತ್ರದುರ್ಗ. ಡಿ.27: ಹೈನುಗಾರಿಕೆಯನ್ನು ಲಾಭದಾಯಕವಾಗಿಸಲು ಉದ್ದಿಮೆ ರೂಪದಲ್ಲಿ ಹೈನುಗಾರಿಕೆ ಕೈಗೊಳ್ಳಬೇಕು ಎಂದು ರೈತರಿಗೆ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ಸಲಹೆ ನೀಡಿದರು.
ಹಿರಿಯೂರು ತಾಲ್ಲೂಕು ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಲಾಭದಾಯಕ ಹೈನುಗಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖರ್ಚು ವೆಚ್ಚವನ್ನು ಲೆಕ್ಕವಿಟ್ಟು ವೈಜ್ಞಾನಿಕವಾಗಿ ಉತ್ತಮ ತಳಿಯ ಹಸು ಎಮ್ಮೆಗಳನ್ನು ಖರೀದಿಸಿ, ಕೊಟ್ಟಿಗೆ ಮತ್ತು ಪೋಷಕಾಂಶ ಮೇವಿನ ನಿರ್ವಹಣೆ ಮಾಡಬೇಕು. ರಾಸುಗಳ ಆರೋಗ್ಯ ನಿರ್ವಹಣೆಯ ಕುರಿತು ರೈತರು ಈ ತರಬೇತಿಯಲ್ಲಿ ನಿಡಲಾಗುವ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು. ಹೈನುಗಾರಿಕೆ ಒಂದು ಪರಿಸರ ಸ್ನೇಹಿ ಕೃಷಿ ಉಪಕಸುಬಾಗಿದ್ದು, ರೈತರ ಆರ್ಥಿಕ ಮಟ್ಟ, ಜನರ ಆರೋಗ್ಯ ಸುಧಾರಿಸುವಲ್ಲಿ ಸಹಕಾರಿಯಾಗಿದ್ದು ರೈತರು ಸ್ವಾವಲಂಬನೆಯ ಜೀವನ ನಡೆಸಲು ಅನುಕೂಲಕರವಾಗಿದೆ ಎಂದರು.
ಭಾರತ ದೇಶವು ಇಡೀ ಪ್ರಪಂಚದಲ್ಲಿ ಹಾಲಿನ ಉತ್ಪಾದನೆಯಲ್ಲಿ ಮುಂದಿದೆ. ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳು ದೇಶದ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಹಾಲು ಉತ್ಪಾದಿಸುತ್ತಿವೆ. ಕರ್ನಾಟಕ ರಾಜ್ಯ 9ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ರೈತಪರ ಚಿಂತಕ ಹಾಗೂ ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ, ಹಿಂದೆ ಹಸು ಸಾಕಾಣಿಕೆಯು ಕೃಷಿಯಲ್ಲಿ ಅನಿವಾರ್ಯವಾಗಿತ್ತು. ಹೈನುಗಾರಿಕೆಯು ರೈತರ ಜೀವನ ಮಟ್ಟ ಸುಧಾರಿಸಲು ಆಧಾರವಾಗಿದೆ. ಕೋಲಾರದಲ್ಲಿ ಹಸು ಸಾಕಾಣಿಕೆಯಲ್ಲಿ ಅನುಸರಿಸುವ ವೈಜ್ಞಾನಿಕ ಪದ್ದತಿ ಮತ್ತು ಅಲ್ಲಿನ ಜನರ ಕೃಷಿಯ ಮೇಲಿನ ಬದ್ದತೆಯನ್ನು ನೋಡಿ ಜಿಲ್ಲೆಯ ರೈತರು ಅದನ್ನು ಅನುಸರಿಸಬೇಕು ಎಂದರು.
ಪಶುಸಂಗೋಪನಾ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಹೈನುಗಾರಿಕೆಯು ರೈತರಿಗೆ ಸದಾ ಚಟುವಟಿಕೆಯಿಂದ ಇರಲು ಸಹಕಾರಿಯಾಗಿದೆ. ರೈತ ಮತ್ತು ಪ್ರಕೃತಿಯ ಭಾಂದವ್ಯವನ್ನು ಬೆಸೆಯುತ್ತದೆ. ಹಸು ಕರುವಿಗೆ ಜನ್ಮ ನೀಡಿದ 3-4 ದಿನಗಳು ಮಹತ್ವದಾಗಿದ್ದು, ಗೀಬಿನ ಹಾಲನ್ನು ಸಂಬಂಧಿಕರಿಗೆ ಗಿಣ್ಣ ಮಾಡಲು ನೀಡುವ ಬದಲು ಹೆಚ್ಚಿನ ಪೋಷಕಾಂಶ ಭರಿತವಾಗಿರುವುದರಿಂದ ಕರುವಿಗೆ ಹೊಟ್ಟ ತುಂಬ ಕುಡಿಯಲು ಬಿಡಬೇಕು. ಕರು ಹುಟ್ಟಿದ 2 ತಿಂಗಳು ಕರುವಿಗೆ ತನ್ನ ತಾಯಿಯ ಹಾಲನ್ನು ಚೆನ್ನಾಗಿ ಕುಡಿಯಲು ಬಿಡುವುದರಿಂದ ಅದರ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಹೈನುಗಾರಿಕೆಯಲ್ಲಿ ಹುಲ್ಲು, ನೀರು, ಶೇಂಗಾ/ದ್ವಿದಳಧಾನ್ಯದ ಹಿಂಡಿಯನ್ನು ಸಮತೋಲನವಾಗಿ ನಿರ್ವಹಣೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿದರು.
ಸಮತೋಲನ ಆಹಾರವು ಹಸುವಿನ ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಲಾಭದಾಯಕ ಹೈನುಗಾರಿಕೆಗೆ ರೈತರು ದಿನನಿತ್ಯ ರಾಸುಗಳ ಜೊತೆ ನಿರಂತರ ಕಾಳಜಿ ಅಗತ್ಯವಿದ್ದು ಇದು ಅವರ ಸಂಸ್ಕøತಿಯಾಗಬೇಕು ಎಂದು ಅಭಿಪ್ರಯಾಪಟ್ಟರು.
ಹಿರಿಯೂರು ಮುಖ್ಯ ಪಶು ವೈದ್ಯಾಧಿಕಾರಿ ಡಾ. ನಾಗರಾಜ್, ಎಮ್ಮೆ ಮತ್ತು ಹಸುಗಳಲ್ಲಿ ಲಾಭದಾಯಕ ಹೈನುಗಾರಿಕೆಗೆ ಉತ್ತಮ ತಳಿ ಆಯ್ಕೆ ಮಾಡಿಕೊಳ್ಳುವ ಹಲವು ಮಾಹಿತಿಯನ್ನು ನೀಡಿದರು.
ಗಿಡಕ್ಕೆ ನೀರೆರೆಯುವ ಮೂಲಕ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಸಹಾಯಕ ಕೃಷಿ ನಿರ್ದೇಶಕಿ ಉಷಾರಾಣಿ ಸ್ವಾಗತಸಿ ಮತ್ತು ನಿರೂಪಣೆ ಮಾಡಿದರು, ಕೃಷಿ ಅಧಿಕಾರಿ ಪವಿತ್ರಾ.ಎಂ.ಜೆ. ರೈತರ ನೊಂದಣಿ ನಿರ್ವಹಿಸಿದರು. ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ರೈತ ಪಶು ಸಾಗಣಿಕೆ ಕುರಿತು ತರಬೇತಿ ಪಡೆದುಕೊಂಡರು. ಬಬ್ಬೂರು ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.