ಝಾನ್ಸಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 10 ನವಜಾತ ಶಿಶುಗಳು ಸಜೀವ ದಹನ
ಸುದ್ದಿಒನ್ | ಉತ್ತರ ಪ್ರದೇಶದ ಝಾನ್ಸಿ ಮೆಡಿಕಲ್ ಕಾಲೇಜಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮಕ್ಕಳ ವಾರ್ಡ್‌ನಲ್ಲಿ (ಎನ್‌ಐಸಿಯು) ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಹಲವು ಮಕ್ಕಳು ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ. 10 ಮಕ್ಕಳ ಶವಗಳನ್ನು ಒಳಗಿನಿಂದ ಹೊರ ತೆಗೆಯಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಿಯಂತ್ರಿಸಲು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ NICU (ಶಿಶು) ವಾರ್ಡ್‌ನಲ್ಲಿ ಶುಕ್ರವಾರ (ನವೆಂಬರ್ 15) ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ವೈದ್ಯಕೀಯ ಕಾಲೇಜಿನಲ್ಲಿ ಗೊಂದಲ ಉಂಟಾಯಿತು. ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ತಕ್ಷಣ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮೊದಲು ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಿದರು. ಬೆಂಕಿಯನ್ನು ಹತೋಟಿಗೆ ತಂದ ನಂತರ ತಂಡವು NICU ವಾರ್ಡ್‌ಗೆ ಪ್ರವೇಶಿಸಿದರು.
ಅಗ್ನಿಶಾಮಕ ದಳವು NICU ವಾರ್ಡ್‌ನಿಂದ ಒಟ್ಟು 50 ಮಕ್ಕಳನ್ನು ರಕ್ಷಿಸಿದ್ದಾರೆ. ಅವರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. 40 ಮಕ್ಕಳನ್ನು ರಕ್ಷಿಸಲಾಗಿದೆ. ಮಾಹಿತಿ ಪಡೆದ ಕೂಡಲೇ ಝಾನ್ಸಿ ಡಿಎಂ ಅವಿನಾಶ್ ಕುಮಾರ್ ಅವರು ಉನ್ನತಾಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮ ಕೈಗೊಂಡರು. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಆರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಅಪಘಾತದ ವೇಳೆ ವೈದ್ಯಕೀಯ ಕಾಲೇಜಿನ ಪ್ರತ್ಯಕ್ಷದರ್ಶಿಯೊಬ್ಬರು ಇಲ್ಲಿಯವರೆಗೆ 40 ಮಕ್ಕಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ವೈದ್ಯಕೀಯ ಕಾಲೇಜು ಅಪಘಾತದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ. ಝಾನ್ಸಿ ಜಿಲ್ಲೆಯ ವೈದ್ಯಕೀಯ ಕಾಲೇಜು ಎನ್‌ಐಸಿಯುನಲ್ಲಿ ನಡೆದ ಅಪಘಾತದಲ್ಲಿ ಮಕ್ಕಳ ಸಾವು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸಿಎಂ ಯೋಗಿ ಆದೇಶದಂತೆ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಝಾನ್ಸಿಗೆ ತೆರಳಿದ್ದಾರೆ. ಅಪಘಾತದ ಕುರಿತು ತನಿಖೆ ನಡೆಸಿ 12 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಝಾನ್ಸಿ ಕಮಿಷನರ್ ಮತ್ತು ಡಿಐಜಿಗೆ ಸಿಎಂ ಆದೇಶಿಸಿದರು. ಮತ್ತೊಂದೆಡೆ, ಈ ಅಪಘಾತಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ಬೆಳಕಿಗೆ ಬರುತ್ತಿರುವುದು ಆಘಾತಕಾರಿಯಾಗಿದೆ. ವೀಡಿಯೋದಲ್ಲಿ ವಾರ್ಡ್‌ನೊಳಗೆ ಕಿರುಚಾಟ ಹಾಗೂ ಕುಟುಂಬಸ್ಥರು ನರಳಾಡುತ್ತಿದ್ದಾರೆ.
ಝಾನ್ಸಿ ಡಿಎಂ ಅವಿನಾಶ್ ಕುಮಾರ್ ಮಾತನಾಡಿ ಸ್ಥಳದಲ್ಲಿದ್ದ ಸಿಬ್ಬಂದಿಗೆ ದೊರೆತ ಮಾಹಿತಿ ಪ್ರಕಾರ ಬೆಳಗ್ಗೆ 10:30 ರಿಂದ 10:45 ರ ನಡುವೆ ಎನ್ ಐಸಿಯು ಒಳಗಿನ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. NICU ನಲ್ಲಿ ಎರಡು ವಾರ್ಡ್‌ಗಳಿವೆ. ಹೊರ ವಾರ್ಡ್‌ನಲ್ಲಿದ್ದ ಎಲ್ಲ ಮಕ್ಕಳು ಸುರಕ್ಷಿತವಾಗಿ ಪಾರಾಗಿದ್ದಾರೆ. 10 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಲವು ಮಕ್ಕಳು ಗಾಯಗೊಂಡಿದ್ದಾರೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.