ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತೆ : ಸಚಿವ ಶಿವಾನಂದ್ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
ಬೆಂಗಳೂರು: ಬರಗಾಲದ ವಿಚಾರವಾಗಿ ಸಚಿವ ಶಿವಾನಂದ ಪಾಟೀಲ್ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಸಂಬಂಧ ಬಿವೈ ವಿಜಯೇಂದ್ರ ಮಾತನಾಡಿ, ಸಚಿವ ಶಿವಾನಂದ ಪಾಟೀಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸರ್ಕಾರ ರೈತರನ್ನು ಪದೇ ಪದೇ ಅವಮಾನ ಮಾಡುತ್ತಿದೆ. ಈ ಮಾತಿಗೆ ಸಚಿವ ಶಿವಾನಂದ ಪಾಟೀಲ್ ರೈತರ ಕ್ಷಮೆಯಾಚಿಸಬೇಕು. ರೈತರ ಬಗ್ಗೆ ಈ ರೀತಿ ಮಾತನಾಡಬಾರದು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ ಅಶೋಕ್, ಸಚಿವ ಶಿವಾನಂದ ಪಾಟೀಲ್ ಈ ಹಿಂದೆಯೂ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದರು. ಪರಿಹಾರ ಜಾಸ್ತಿ ಸಿಗುತ್ತೆ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಮೊದಲು ಒಂದು ಲಕ್ಷ ಪರಿಹಾರ ಇತ್ತು, ಈಗ 5 ಲಕ್ಷ ರೂ. ಕೊಡುತ್ತಾರೆ. ಅದಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ರೈತ ವಿರೋಧಿ ಸರ್ಕಾರ, ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಹಿಂದೆ ರೈತರ ಬಗ್ಗೆ ಹಗುರವಾಗಿ ಹೇಳಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾದರೂ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.
ಶಿವಾನಂದ್ ಪಾಟೀಲ್ ಸ್ವತಃ ಒಬ್ಬ ರೈತರಾಗಿ ಇಂತ ಹೇಳಿಕೆ ದುರದೃಷ್ಟಕರ. ಮಂತ್ರಿ ಮಂಡಲದಲ್ಲಿ ಅವರು ಮುಂದುವರಿಯಬಾರದು. ಇದು ರೈತ ವಿರೋಧಿ ಸರ್ಕಾರ. ಸಾಲಮನ್ನಾಕ್ಕಾಗಿ ರೈತರು ಬರಗಾಲಕ್ಕಾಗಿ ಕಾಯುತ್ತಿದ್ದಾರೆ ಅನ್ನೋದು ಸೂಕ್ತವಲ್ಲ. ಅವರು ಮಾನಸಿಕರಾಗಿ ಅಸ್ವತ್ಥರಾಗಿದ್ದಾರೆ. ಕರ್ನಾಟಕಕ್ಕೆ ಅವರು ಅವಮಾನ ಮಾಡಿದ್ದಾರೆ. ತಕ್ಷಣವೇ ಸಚಿವ ಸ್ಥಾನದಿಂದ ವಜಾ ಆಗಬೇಕು ಎಂದು ಶಾಸಕ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.