ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ : ಆಕೆ ಇನ್ನು ನೆನಪು ಮಾತ್ರ....!
ಸುದ್ದಿಒನ್, ಬೆಂಗಳೂರು, ಜುಲೈ. 11 : ಕನ್ನಡಿಗರ ಮನೆ ಮಾತಾಗಿದ್ದ, ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ (51 ವರ್ಷ) ಅವರು ನಿಧನರಾಗಿದ್ದಾರೆ.
ದೂರದರ್ಶನ ವಾಹಿನಿಯಲ್ಲಿ ಅಚ್ಚ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದು ಕಿರುತೆರೆ ನಿರೂಪಕಿ, ನಟಿ ಕ್ಯಾನ್ಸರ್ನಿಂದ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.
ಕಿರುತೆರೆಯಲ್ಲಿ ಮೂಡಿಬಂದಿದ್ದ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ, 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಎಂಬ ಪಾತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿದ್ದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಸಿನಿಮಾ ಮೂಲಕ ಅಪರ್ಣಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅವರು ಕೊನೆಯದಾಗಿ ನಟಿಸಿದ್ದ ‘ಗ್ರೇ ಗೇಮ್ಸ್’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಂತಾಪ : ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.
ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.