ಸುಳ್ಳು ಜಾತಿ ಪ್ರಮಾಣ ಪತ್ರ ಕೇಸ್ : ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಗೆ ಮತ್ತಷ್ಟು ಸಂಕಷ್ಟ..!
ಬೆಂಗಳೂರು: ಸುಳ್ಳು ಜಾತಿ ಪ್ರಮಾಣ ಪತ್ರ ಕೇಸಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ಅಸ್ತು ಎಂದಿದೆ. ಇದರಿಂದಾಗಿ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಮಂಜುನಾಥ್ ವಿರುದ್ಧ 2018ರಲ್ಲಿ ಮುಳುಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋರ್ಜರಿ, ವಂಚನೆ, ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು. ಆ ಪ್ರಕರಣವನ್ನು ರದ್ದುಕೋರಿ ಕೊತ್ತೂರು ಮಂಜುನಾಥ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು (ಡಿಸೆಂಬರ್ 12) ರಂದು ಅರ್ಜಿ ವಿಚಾರಣೆ ನಡೆದಿದ್ದು ಕೇಸ್ ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದ್ದು, ತನಿಖೆಗೆ ಅಸ್ತು ಎಂದಿದೆ.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಳುಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ತಾವು ಪರಿಶಿಷ್ಟ ಜಾತಿಗಳ ಪಟ್ಟಿಗೆ ಬರುವ ಬುಡುಗ ಜಂಗಮ ಜಾತಿಗೆ ಸೇರಿದವರೆಂದು ಘೋಷಿಸಿಕೊಂಡು ಸ್ಪರ್ಧೆ ಮಾಡಿದ್ದರು. ಆದರೆ ಈ ವೇಳೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣದ ಸಿಂಧುತ್ವ ಪ್ರಶ್ನಿಸಿದ್ದರು. ಮಂಜುನಾಥ್ ಅವರು ತಾವು ಪರಿಶಿಷ್ಟ ಜಾತಿಗೆ ಸೇರಿದವರೆಂಬುದನ್ನು ಸಾಬೀತುಪಡಿಸುವಲ್ಲಿ ವಿಫಲರಾದರು. ಬಳಿಕ 2018 ರಲ್ಲಿ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿತ್ತು. ನಂತರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಅಲ್ಲಿಯೂ ಜಯ ಸಿಗಲಿಲ್ಲ. ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾತಿ ಪರಿಶೀಲನೆ ಸಮಿತಿ ಮಂಜುನಾಥ್ ಅವರ ಜಾತಿಯನ್ನು ಪರಿಶೀಲಿಸಬೇಕು ಎಂದು ಆದೇಶ ನೀಡಿತು. ಬಳಿಕ ಸಮಿತಿಯೂ ಪರಿಶೀಲಿಸಿದಾಗ ಮಂಜುನಾಥ್ ಬುಡುಗ ಜಾತಿಗೆ ಸೇರಿದವರಲ್ಲ ಬೈರಾಗಿ ಜಾತಿಗೆ ಸೇರಿದವರು ಎಂಬುದು ಸಾಬೀತಾಗಿತ್ತು. ಇದು ಒಬಿಸಿಗೆ ಬರುತ್ತದೆ.