ಬಿಜೆಪಿ ಮಂಡ್ಯವನ್ನೂ ಜೆಡಿಎಸ್ ಗೆ ಬಿಟ್ಟುಕೊಟ್ಟರೂ ಸುಮಲತಾ ಸ್ಪರ್ಧೆ ಮಂಡ್ಯದಲ್ಲೇ : ಆಪ್ತರಿಂದ ಸ್ಪಷ್ಟನೆ
ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ಐದಾರು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಅದರಲ್ಲೂ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಬೇಕೇ ಬೇಕು ಎಂಬ ಬೇಡಿಕೆಯನ್ನು ಗಟ್ಟಿಯಾಗಿ ತಿಳಿಸಿದೆ. ಇದರಿಂದಾಗಿ ಸುಮಲತಾ ಸ್ಪರ್ಧೆಯ ಬಗ್ಗೆಯೇ ಎಲ್ಲೆಲ್ಲೂ ಚರ್ಚೆಗಳಾಗುತ್ತಿವೆ. ಇತ್ತಿಚೆಗಷ್ಟೇ ಸುಮಲತಾ ಬಿಜೆಪಿ ಪಕ್ಷ ಸೇರಿದ್ದರು. ಹೀಗಾಗಿ ಟಿಕೆಟ್ ಸಿಗುವುದು ಕಷ್ಟಸಾಧ್ಯ. ಮಂಡ್ಯ ಬಿಟ್ಟು, ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗಳ ನಡುವೆ ಸುಮಲತಾ ಆಪ್ತರೊಬ್ಬರು, ಮಂಡ್ಯದಿಂದಾನೇ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸುಮಲತಾ ಅವರ ಆಪ್ತ ಹನಕೆರೆ ಶಶಿಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ, ಸುಮಲತಾ 2024ಕ್ಕೆ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿರುತ್ತಾರೆ. ಬಿಜೆಪಿ ಮಂಡ್ಯವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರು ಸುಮಲತಾ ಮಂಡ್ಯದಿಂದಾನೇ ಸ್ಪರ್ಧೆ ಮಾಡುತ್ತಾರೆ. ಇತ್ತಿಚಿಗೆ ಕೆಲ ಗೊಂದಲಗಳು ಇದ್ದವು. ಕಳೆದ 4 ವರ್ಷದಿಂದ ಸುಮಲತಾ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದಿದ್ದಾರೆ.
ಸುಮಲತಾ ಅವರಿಗೆ ಮಂಡ್ಯದಿಂದ ಟಿಕೆಟ್ ಇಲ್ಲ ಎಂಬುದಾಗಿ ಚರ್ಚೆ ನಡೆಯುತ್ತಾ ಇದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾನು ಇರುತ್ತೇನೆ ಎಂದು ಸುಮಲತಾ ನಮಗೆಲ್ಲಾ ಹೇಳಿದ್ದಾರೆ. ಸುಮಲತಾ ಅವರೂ ಇನ್ನು ಬಿಜೆಪಿಯ ಸದಸ್ಯತ್ವ ಪಡೆದಿಲ್ಲ. ಈಗಲೂ ಸುಮಲತಾ ಪಕ್ಷೇತರ ಸಂಸದೆಯಾಗಿದ್ದಾರೆ. ಬಿಜೆಪಿ ಕೂಡ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ. ಪಕ್ಷ ಯಾವುದಾದರೇನು ಸುಮಲತಾ ಅಭ್ಯರ್ಥಿಯಾಗಿ ಇರಬೇಕು. ಸುಮಲತಾ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದು ಅವರೇ ತೀರ್ಮಾನ ಮಾಡುತ್ತಾರೆ. ಆದರೆ ಅವರಿಗೆ ನಮ್ಮ ಬೆಂಬಲ ಇದ್ದೆ ಇರುತ್ತದೆ ಎಂದಿದ್ದಾರೆ.