ರಾಮ ಮಂದಿರ ಉದ್ಘಾಟನೆ ದಿನ ರಜೆ ಘೋಷಿಸಲು ಈಶ್ವರಪ್ಪ ಮನವಿ
ಶಿವಮೊಗ್ಗ: ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಈ ದಿನಕ್ಕಾಗಿ ಇಡೀ ವಿಶ್ವದ ಜನರೇ ಕಾಯುತ್ತಿದ್ದು, ದೇಶದ ಕೆಲ ರಾಜ್ಯಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೂ ರಜೆ ಘೋಷಣೆ ಮಾಡಲೆಂದು ಮನವಿ ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಚುವ ಕೆ ಎಸ್ ಈಶ್ವರಪ್ಪ, ಗುಲಾಮಗಿರಿಯಿಂದ ಪ್ರಭು ಶ್ರೀರಾಮಚಂದ್ರನ ಮಂದಿರವನ್ನು ಮುಕ್ತ ಮಾಡಿ, ಯಾರೋ ಒಬ್ಬರು ವಿದೇಶಿ ಬಾಬರ್ ನಮ್ಮ ದೇಶಕ್ಕೆ ಬಂದು, ಬಾಬರ್ ಮಸೀದಿ ಎಂದು ಹೇಳುವಂತ ಮಸೀದಿಯನ್ನು ರಾಮ ಭಕ್ತರು ಧ್ವಂಸ ಮಾಡಿ, 22ರಂದು ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಆಗುತ್ತಿರುವುದು ರಾಮನ ಭಕ್ತರಿಗೆ ಅತಿ ಸಂತಸದ ದಿನ. ಇಂಥ ದಿನ ನಾವೆಲ್ಲಾ ಜೀವಂತವಾಗಿರುವುದೇ ಆನಂದ. ಇಡೀ ಪ್ರಪಂಚದ ಜನತೆಗೆ ಶ್ರೀರಾಮಚಂದ್ರ ಹೇಗಿದ್ದ ಎಂಬುದು ಎಲ್ಲರಿಗೂ ಗೊತ್ತು.
ವಿಶೇಷವಾಗಿ ಮಹಾತ್ಮ ಗಾಂಧೀಜಿ ಅವರು ಈ ದೇಶ ರಾಮರಾಜ್ಯ ಆಗಬೇಕು ಎಂದು ಬಯಸಿದ್ದರು. ಮರ್ಯಾದ ಪುರುಷೋತ್ತಮನ ಮಂದಿರ ಆಗುತ್ತಿರುವ ಈ ಸಂದರ್ಭದಲ್ಲಿ ನಾನು ಪ್ರಾರ್ಥನೆ ಮಾಡುತ್ತೀನಿ. ಕರ್ನಾಟಕ ಸರ್ಕಾರ ಅಂದು ರಜೆ ಘೋಷಿಸಿ, ರಾಮ ಮಂದಿರ ಉದ್ಘಾಟನೆ ನೋಡಲು ಅವಕಾಶ ಮಾಡಿಕೊಡಬೇಕು. ಅಲ್ಲಿ ಹೋಗುವುದಕ್ಕೆ ಆಗದೆ ಇದ್ದರು, ಎಲ್ಲಾ ಟಿವಿಗಳಲ್ಲೂ ಸಿಗಲಿದೆ.
22ರಂದು ರಾಮ ಮಂದಿರದ ಜಾಗದಲ್ಲಿ ರಾಮನ ಪ್ರತಿಷ್ಠಾಪನೆಯಾಗುವ ಸಂದರ್ಭದಲ್ಲಿ ಇಡೀ ವಿಶ್ವವೇ ನೋಡುತ್ತದೆ. ಆ ಕ್ಷಣವನ್ನು ನಮ್ಮ ರಾಜ್ಯದ ಜನತೆ ಕೂಡ ನೋಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಹೀಗಾಗಿ ನಮ್ಮ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೀನಿ ಹಾಗೂ ಪ್ರಾರ್ಥನೆ ಮಾಡುತ್ತೀನಿ ಎಂದಿದ್ದಾರೆ.