ಕೃಷಿ ಕ್ಷೇತ್ರದಲ್ಲಿ ಬಿಇಇ ಸ್ಟಾರ್‍ರೇಟ್ ಪಂಪ್‍ಸೆಟ್ ಬಳಕೆಯಿಂದ ವಿದ್ಯುತ್ ಉಳಿತಾಯ : ರಾಜಶೇಖರ್ ಭಾರ್ಕೆರ್
ಚಿತ್ರದುರ್ಗ.ಡಿ.06: ಬಿ.ಇ.ಇ ಸ್ಟಾರ್ ಲೇಬಲ್‍ವುಳ್ಳ ಕೃಷಿ ಹಾಗೂ ಗೃಹ ಬಳಕೆಯ ಪಂಪ್‍ಸೆಟ್‍ಗಳು ಹೆಚ್ಚು ಇಂಧನದಕ್ಷತೆ ಹೊಂದಿರುವುದರಜೊತೆಗೆ ವಿದ್ಯುತ್ ಉಳಿತಾಯಕ್ಕೆ ಸಹಕಾರಿಯಾಗಿವೆ. ಕೃಷಿ ಕ್ಷೇತ್ರದಲ್ಲಿ ಬಿ.ಇ.ಇ ಸ್ಟಾರ್ ರೇಟ್ ಉಳ್ಳ ಪಂಪುಗಳನ್ನು ಬಳಸುವುದರಿಂದ ಅಂದಾಜು ಶೇ.30 ರಷ್ಟು ವಿದ್ಯುತ್ ಉಳಿತಾಯ ಸಾಧ್ಯ ಎಂದು ಬಬ್ಬೂರು ತೋಟಗಾರಿಕೆ ಕಾಲೇಜು ಸಹಾಯಕ ಪ್ರಾಧ್ಯಾಪಕ ರಾಜಶೇಖರ್ ಭಾರ್ಕೆರ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿಕೇಂದ್ರದಲ್ಲಿ ಈಚೆಗೆ ಬ್ಯರೋ ಅಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಇವರ ಸಹಯೋಗದೊಂದಿಗೆ ಬಿ.ಇ.ಇ ಸ್ಟಾರ್ ಲೆಬಲ್ ಹೊಂದಿರುವ ಹೆಚ್ಚು ವಿದ್ಯುತ್ ದಕ್ಷತೆಯುಳ್ಳ ಕೃಷಿ ಪಂಪ್‍ಸೆಟ್‍ಗಳು ಹಾಗೂ ಜಲ ಸಂರಕ್ಷಣೆ ಕುರಿತು ರೈತರಿಗೆ ಒಂದು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಿಯಾದ ಪಂಪಿಂಗ್ ಸಿಸ್ಟಮ್ ಘಟಕಗಳನ್ನು ಆಯ್ಕೆ ಮಾಡುವ ಮೂಲಕ ವಿದ್ಯುತ್ ನಷ್ಟಗಳನ್ನು ಕಡಿಮೆ ಮಾಡಬಹುದು. ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು. ಏಕೆಂದರೆ, ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ಆದುದರಿಂದ ನೀರನ್ನು ಮಿತವಾಗಿ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಬಳಸಿದರೆ ವಿದ್ಯುತ್ತಿನ ಉಳಿತಾಯ ಸಾಧ್ಯ ಎಂದು ಹೇಳಿದರು.
ಚಳ್ಳಕೆರೆ ಉಪ ಕೃಷಿ ನಿರ್ದೇಶಕ ಡಾ.ಬಿ.ಎನ್. ಪ್ರಭಾಕರ್ ಮಾತನಾಡಿ, ಕೃಷಿಯಲ್ಲಿ ವಿದ್ಯತ್ ಮತ್ತು ನೀರನ್ನು ಮಿತವಾಗಿ ಬಳಸಲು ಬಿ.ಇ.ಇ ಸ್ಟಾರ್ ಲೆಬಲ್ ಹೊಂದಿರುವ ಹೆಚ್ಚು ವಿದ್ಯುತ್ ದಕ್ಷತೆಯುಳ್ಳ ಕೃಷಿ ಪಂಪ್‍ಸೆಟ್‍ಗಳ ಬಳಕೆಗೆ ಒತ್ತು ನೀಡಬೇಕು. ಆಗಿಂದಾಗೆ ನೀರು ಉಣಿಸುವ ಪೈಪ್‍ಲೈನ್‍ನ ವಾಷರ್‍ಗಳನ್ನು ಪರೀಕ್ಷಿಸುವುದು ಮತ್ತು ಎಂಡ್‍ಕ್ಯಾಪ್‍ನ್ನು ಪರೀಕ್ಷಿಸಿ ಸ್ವಚ್ಚಗೊಳಿಸಬೇಕು ಎಂದು ಹೇಳಿದರು.
ಜಲ ವಿಜ್ಞಾನಿ ಹಾಗೂ ಮಳೆನೀರು ಕೋಯ್ಲು ತಜ್ಞ ಡಾ. ಎನ್.ಜೆ.ದೇವರಾಜರೆಡ್ಡಿ ಮಾತನಾಡಿ, ಮಳೆನೀರು ಕೋಯ್ಲು, ಬೋರ್‍ವೆಲ್‍ನಲ್ಲಿ ಅಂತರ ಜಲ ಮರುಪೂರಣ, ಮಳೆ ನೀರಿನ ಬಜೆಟ್, ನೀರಿನ ಮಿತಬಳಕೆ ಮತ್ತು ಜಲ ಸಂರಕ್ಷಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಸೆಲ್ಕೋ ಸಂಸ್ಥೆಯ ವ್ಯವಸ್ಥಾಪಕ ಅಜ್ಜಯ್ಯ ಅವರು, ಸೌರಶಕ್ತಿಯಿಂದ ವಿವಿಧ ಜೀವನೋಪಾಯದ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತಾ, ಸೌರಶಕ್ತಿಯಿಂದ ಚಾಲಿತ ಕೃಷಿ ಪಂಪ್‍ಸೆಟ್‍ಗಳು, ಹಿಟ್ಟಿನಗಿರಣಿ, ರೊಟ್ಟಿ ತಯಾರಿಸುವ ಯಂತ್ರ, ಮನೆಯಲ್ಲಿ ಸೌರ ವಿದ್ಯುತ್ ಚಾಲಿತ ಉಪಕರಣಗಳು, ಸೋಲಾರ್ ಬಿಸಿ ನೀರಿನಘಟಕ, ವಿವಿಧ ಸೌರಶಕ್ತಿಯಿಂದ ಚಾಲಿತ ವಿವಿಧ ಕೃಷಿ ಯಂತ್ರೋಪಕರಣಗಳ ಬಗ್ಗೆ ವಿಷಯ ಮಂಡನೆ ಮಾಡಿ ರೈತರಲ್ಲಿ ಸೌರಶಕ್ತಿಯ ಬಳಕೆಯ ಕುರಿತು ಜಾಗೃತಿ ಮೂಡಿಸಿದರು.
ಬೇಸಾಯಶಾಸ್ತ್ರಜ್ಞ ಅಂಜಿನಪ್ಪ ಮಾತನಾಡಿ, ಹನಿ ಮತ್ತು ತುಂತುರು ನೀರಾವರಿಯಿಂದ ನೀರಿನ ಮಿತಬಳಕೆ ಸಾಧ್ಯ. ಹನಿ ನೀರಾವರಿ ಉಪಕರಣಗಳ ಆಯ್ಕೆ, ವಿನ್ಯಾಸ, ಆಳವಡಿಕೆ, ಕ್ಷೇತ್ರದಲ್ಲಿ ಉದ್ಬವಿಸುವ ಸಮಸ್ಯೆಗಳಿಗೆ ಪರಿಹಾರ, ರಸವಾರಿ ಮೂಲಕ ವಿವಿಧ ಪೋಷಕಾಂಶಗಳ ನಿರ್ವಹಣೆ ಮತ್ತು ವಿವಿಧ ರೀತಿಯ ಫಿಲ್ಟರ್‍ಗಳ ಆಳವಡಿಕೆ, ಆಸಿಡ್ ಕ್ಲೀನಿಂಗ್ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಇಂಧನದಕ್ಷತೆ ಹಾಗೂ ಸಂರಕ್ಷಣಾ ಮಾಹಿತಿ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಉಪಕೃಷಿ ನಿರ್ದೇಶಕ ಶಿವಕುಮಾರ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ವೀರಭದ್ರರೆಡ್ಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ,. ಸಹಾಯಕ ಕೃಷಿ ನಿರ್ದೇಶಕರಾದ ಉಷಾರಾಣಿ, ಕೃಷಿ ಅಧಿಕಾರಿಗಳಾದ ರಂಜಿತಾ ಮತ್ತು ಪವಿತ್ರ ಹಾಗೂ ಜಿಲ್ಲಾ ಕೃಷಿ ತರಬೇತಿಕೇಂದ್ರ, ಬಬ್ಬೂರು ಫಾರಂನ ಸಿಬ್ಬಂದಿಯವರು ಇದ್ದರು.