ಎಸ್ಐಟಿ.. ಸಿಬಿಐ ತನಿಖೆ ನಡೆಸುತ್ತಿರವಾಗಲೇ ನಾಗೇಂದ್ರ ಅವರನ್ನ ವಶಕ್ಕೆ ಪಡೆದ ಇಡಿ : ಗೃಹ ಸಚಿವರ ಪ್ರತಿಕ್ರಿಯೆ ಏನು..?
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. 187 ಕೋಟಿ ಹಗರಣವಿದು. ಈಗಾಗಲೇ ಹಣ ಎಲ್ಲೆಲ್ಲಿ ಟ್ರಾನ್ಸ್ ಫರ್ ಆಗಿದೆ ಅದನ್ನೆಲ್ಲಾ ಮಾಹಿತಿ ಹುಡುಕಿ, ತರಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಈ ಕೇಸನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿತ್ತು. ಬಳಿಕ ಸಿಬಿಐ ಕೂಡ ಈ ಕೇಸಿನ ತನಿಖೆ ನಡೆಸುತ್ತಿದೆ. ಇದರ ನಡುವೆ ನುನ್ನೆ ಇಡಿ ಮಧ್ಯಪ್ರವೇಶಿಸಿ, ಬಿ.ನಾಗೇಂದ್ರ ಅವರನ್ನು ಅರೆಸ್ಟ್ ಮಾಡಿದೆ. ಈಗಾಗಲೇಜ ನ್ಯಾಯಾಲಯ ಕೂಡ ನಾಗೇಂದ್ರ ಅವರನ್ನು ಇಡಿ ಕಸ್ಟಡಿಗೆ ನೀಡಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಈಡಿ ಅಧಿಕಾರಿಗಳು ತಮಗಿರುವ ಮಾಹಿತಿಗಳ ಪ್ರಕಾರ ಬಿ.ನಾಗೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದುಕೊಂಡಿರುವುದರಿಂದ ನಮಗೇನು ಅಭ್ಯಂತರವಿಲ್ಲ. ಆದರೆ ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ರಾಜಕೀಯವಾಗಿ ಉಪಯೋಗಿಸಿಕೊಳ್ಳುವುದನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ.
ಇದನ್ನ ಯಾಕೆ ಹೇಳ್ತಾ ಇದ್ದೀನಿ ಗೊತ್ತಾ..? ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರವೇ ನೇಮಿಸಿರುವ ಎಸ್ಐಟಿ ತನಿಖೆ ನಡೆಸುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ವ್ಯವಹಾರಗಳನ್ನು ಸಿಬಿಐ ಅಧಿಕಾರುಗಳು ಪರಿಶೀಲನೆ ನಡೆಸಿದ್ದಾರೆ. ಇಡಿ ಮಧ್ಯೆ ಪ್ರವೇಶಿಸುವ ಅಗತ್ಯವಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ನಾಗೇಂದ್ರ ಅವರನ್ನು ಇಡಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.