ವಿವಾದದ ಬೆನ್ನಲ್ಲೇ ಯುವ ಕವಿಗೋಷ್ಠಿಯಿಂದ ಭಗವಾನ್ ಹೆಸರು ಕೈಬಿಟ್ಟ ದಸರಾ ಸಮಿತಿ..!
ಮೈಸೂರು : ನಾಡಹಬ್ಬ ಮೈಸೂರು ದಸರಾ ಆರಂಭವಾಗಿದೆ. ಇಂದಿನಿಂದ ಹಲವು ಕಾರ್ಯಕ್ರಮಗಳು ಮೈಸೂರಿನಲ್ಲಿ ಜರುಗಲಿವೆ. ಅದರಲ್ಲಿ ಯುವ ಕವಿಗೋಷ್ಠಿ ಕೂಡ. ಆದರೆ ಈ ಬಾರಿಯ ಯುವ ಕವಿಗೋಷ್ಠಿಯಿಂದ ಪ್ರೊ. ಕೆ ಎಸ್ ಭಗವಾನ್ ಅವರ ಹೆಸರನ್ನು ಕೈ ಬಿಡಲಾಗಿದೆ.
ಭಗವಾನ್ ಅವರು ಇತ್ತಿಚೆಗೆ ಕುವೆಂಪು ಅವರ ಒಂದು ಮಾತನ್ನು ಹೇಳಿದ್ದರು. ಅದು ಒಕ್ಕಲಿಗರ ಬಗ್ಗೆ. ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದರು. ಈ ಮಾತಿಗೆ ಕೋಪಗೊಂಡ ಒಕ್ಕಲಿಗ ಸಮುದಾಯ, ಈಗಾಗಲೇ ಪ್ರತಿಭಟನೆ ನಡೆಸಿ, ಭಗವಾನ್ ಅವರ ಮನೆಗೆ ಮುತ್ತಿಗೆ ಹಾಕುವ ಯತ್ನವನ್ನು ಮಾಡಿದ್ದಾರೆ. ಇದೀಗ ದಸರಾ ಸಮಿತಿ ಒಕ್ಕಲಿಗ ಸಮುದಾಯದ ಹಠಕ್ಕೆ ಮಣಿದಿದ್ದು, ಭಗವಾನ್ ಹೆಸರನ್ನು ಕೈಬಿಟ್ಟಿದೆ.
ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ ಭಗವಾನ್ ಹೆಸರು ಕೈ ಬಿಡಬೇಕು. ಹಾಗೂ ಪ್ರೊ ಭಗವಾನ್ ಮೂಲಕ ಉದ್ಘಾಟನೆ ಮಾಡಿಸದಂತೆ ಒಕ್ಕಲಿಗ ಸಮುದಾಯ ಒತ್ತಾಯಿಸಿತ್ತು. ಒಂದು ವೇಳೆ ಅವರಿಂದ ಉದ್ಘಾಟನೆ ಮಾಡಿಸಿದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಇದಕ್ಕೆ ಮಣಿದು ಮೈಸೂರು ದಸರಾ ಆಚರಣೆ ಸಮಿತಿ, ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿ ಯುವ ಕವಿಗೋಷ್ಠಿಯನ್ನು ಪ್ರೊ. ಭಗವಾನ್ ಬದಲು ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಅವರಿಂದ ಉದ್ಘಾಟನೆ ಮಾಡಿಸಲು ತೀರ್ಮಾನಿಸಿದೆ.