ಯುವನಿಧಿಗೆ ಚಾಲನೆ : ಗ್ಯಾರಂಟಿಗಳು ಜಾರಿಯಾದ ಮೇಲೂ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ : ಮೋದಿ ಅವರಿಗೆ ಸಿಎಂ ಸವಾಲು..!
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಕೂಡ ಒಂದು. ಈಗಾಗಲೇ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇಂದಿನಿಂದ ಯುವನಿಧಿಗೂ ಚಾಲನೆ ಸಿಕ್ಕಿದೆ. ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಯೋಜನೆಗೆ ಚಾಲನೆ ನೀಡಿದ್ದಾರೆ.
ಯುವನಿಧಿ ಯೋಜನೆ ರಾಜ್ಯಾದ್ಯಂತ ಇಂದಿನಿಂದ ಚಾಲ್ತಿಗೆ ಬರಲಿದ್ದು, ಪದವೀಧರ ನಿರುದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಬಹುದು. ಡಿಪ್ಲೊಮಾ ಆದವರಿಗೆ ಪ್ರತಿ ತಿಂಗಳು 1500, ಪದವಿ ಮುಗಿಸಿದವರಿಗೆ ಪ್ರತಿ ತಿಂಗಳು 3000 ರೂಪಾಯಿ ಎರಡು ವರ್ಷಗಳ ಕಾಲ ಸಿಗಲಿದೆ. ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಚಿವರಾದ ಶರಣ ಪ್ರಕಾಶ್, ನಾಗೇಂದ್ರ, ಪ್ರಿಯಾಂಕದ ಖರ್ಗೆ, ಎಂ ಸಿ ಸುಧಾಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕ ದಿವಾಳಿಯಾಗಲಿದೆ ಎಂದು ಪಿಎಂ ಮೋದಿ ಹೇಳಿದ್ದರು. ಆದರೆ ರಾಜ್ಯದ ಜನತೆಗೆ ಈಗಲೂ ಹೇಳುತ್ತೇನೆ. ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೂ ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ದಿವಾಳಿಯಾಗಲಿದೆ ಎನ್ನುವುದಕ್ಕೆ ಮೋದಿ ಏನು ಆರ್ಥಿಕ ತಜ್ಞರಾ..? ನರೇಂದ್ರ ಮೋದಿಜೀ ಕರ್ನಾಟಕ ರಾಜ್ಯ ದಿವಾಳಿಯಾಗಿಲ್ಲ. ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಆರ್ಥಿಕವಾಗಿ ಗ್ಯಾರಂಟಿ ಜಾರಿ ಮಾಡಿದ ಮೇಲೂ ಕರ್ನಾಟಕ ಸದೃಢವಾಗಿದೆ. 39,000 ಕೋಟಿ ರೂಪಾಯಿಗಳನ್ನ ಈ ವರ್ಷ ನಾವು ಗ್ಯಾರಂಟಿಗಳಿಗೆ ಒದಗಿಸಿದ್ದೇವೆ. ಮಾರ್ಚ್ ಕೊನೆವರೆಗೆ 250 ಕೋಟಿ ರೂ. ಖರ್ಚು ಮಾಡ್ತಿದ್ದೇವೆ. ಯುವನಿಧಿ ಯೋಜನೆ 2024ರ ಜನವರಿಯಲ್ಲಿ ಈ ಯೋಜನೆ ಪ್ರಾರಂಭವಾಗುತ್ತಿದೆ. ಪ್ರಧಾನಿ ಮೋದಿಯವರು ಗ್ಯಾರಂಟಿ ಜಾರಿ ಮಾಡೋಕ್ಕಾಗೋದಿಲ್ಲ. ಇದನ್ನ ಜಾರಿ ಮಾಡಿದ್ರೆ ಕರ್ನಾಟಕ ದಿವಾಳಿಯಾಗುತ್ತೆ ಎಂದಿದ್ದರು.