ಪೀಠ ಬೇಕಾ..? ರಾಜಕೀಯ ಬೇಕಾ..? : ದಿಂಗಾಲೇಶ್ವರ ಸ್ವಾಮೀಜಿ ಆಯ್ಕೆಗೆ ಬಿಟ್ಟ ಭಕ್ತರು
ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಅವರು ಕಣದಲ್ಲಿದ್ದಾರೆ. ಅವರ ಸ್ಪರ್ಧೆಯನ್ನು ಖಂಡಿಸಿ, ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆಗೆ ಸ್ಪರ್ಧೆ ನಡೆಸಿದ್ದಾರೆ. ಆದರೆ ಇದು ಭಕ್ತರಲ್ಲಿಯೇ ಗೊಂದಲವನ್ನುಂಟು ಮಾಡಿದೆ. ಹಲವರು ಸ್ವಾಮಿಗಳ ಸ್ಪರ್ಧೆಗೆ ಬೆಂಬಲ ನೀಡಿದರೆ, ಇನ್ನು ಹಲವು ಭಕ್ತರು ಬೇಡ ಎಂದೇ ಹೇಳುತ್ತಿದ್ದಾರೆ. ಇದೀಗ ರಾಜಕೀಯ ಅಥವಾ ಪೀಠ ಯಾವುದು ಬೇಕು ಎಂಬ ಆಯ್ಕೆಯನ್ನು ಸ್ವಾಮೀಜಿಗಳೇ ಮಾಡಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.
ಭಕ್ತರು ಈ ಬಗ್ಗೆ ಸ್ವಾಮೀಜಿಯ ಆಯ್ಕೆಗೆ ಬಿಟ್ಟಿದ್ದು, ಏಪ್ರಿಲ್ 18ರವರೆಗೂ ಕಾಯುತ್ತೇವೆ. ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಶಿರಹಟ್ಟಿ ಫಕೀರೇಶ್ವರ ಪೀಠವನ್ನು ತೊರೆಯಬೇಕು. ಶಿರಹಟ್ಟಿ ಫಕಿರೃಶ್ವರ ಮಠದ ಪೀಠವೂ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದು, ಸ್ವಾಮೀಜಿಗಳು ರಾಜಕೀಯಕ್ಕೆ ಬರದೆ, ಭಕ್ತರಿಗೆ ದಾರಿ ತೋರಿಸಬೇಕು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಲಿಂಗಾಯತರಿಗೆ ಅನ್ಯಾಯ ಮಾಡಿದ್ದರೆ, ಅದನ್ನು ಪ್ರಜ್ಞಾವಂತರು ಬಹಿರಂಗ ಪಡಿಸಬೇಕು. ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಮಠದ ಭಕ್ತರಿಗೂ ಒಳ್ಳೆಯದಲ್ಲ ಎಂದು ಗದಗ, ಲಕ್ಷ್ಮೇಶ್ವರ ಸೇರಿದಂತೆ ವಿವಿಧ ಭಾಗಗಳ ಮಠದ ಭಕ್ತರು ದಿಂಗಾಲೇಶ್ವರ ಶ್ರೀಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದ ದಿಂಗಾಲೇಶ್ವರ ಶ್ರೀಗಳಿಗೆ ಇದೊಂದು ರೀತಿಯ ಆಘಾತ ತಂದಿದೆ. ಲಿಂಗಾಯತ ಸಮುದಾಯದ ಭಕ್ತರೆಲ್ಲ ಬೆಂಬಲಕ್ಕೆ ನಿಲ್ಲುತ್ತಾರೆ ಎಂದುಕೊಂಡಿದ್ದ ಊಹೆ ತಪ್ಪಾಗಿದೆ. ಈಗ ಸ್ವಾಮೀಜಿಗಳು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.