ಉತ್ತರ ನೀಡುವ ದಮ್ಮು ತಾಕತ್ತು ಇದೆಯೇ ? : ಕಾಂಗ್ರೆಸ್ ನಿಂದ ಬಿಜೆಪಿ ಹಾಗೂ ಜೆಡಿಎಸ್ ಗೆ ಪ್ರಶ್ನೆಗಳ ಸುರಿಮಳೆ
ಬೆಂಗಳೂರು: ರಾಜ್ಯದಲ್ಲಿ ಹನುಮ ಧ್ವಜದ ವಿಚಾರ ಬಾರೀ ಸದ್ದು ಮಾಡುತ್ತಿದೆ. ಇದರಿಂದ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಹನುಮ ಧ್ವಜ ವಿಚಾರಕ್ಕೆ ಬಿಜೆಪಿ ನಾಯಕರ ಬೆಂಬಲವೂ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ.
ಬಿಜೆಪಿಯ ಲೋಕಸಭಾ ಚುನಾವಣೆಯ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ, ಇದಕ್ಕೆ ಸೋಕಾಲ್ಡ್ ಜಾತ್ಯತೀತ ಜನತಾ ದಳ ಪೂರ್ಣ ಸಹಕಾರ ನೀಡುತ್ತಿದೆ. ಆರ್ ಅಶೋಕ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ದಮ್ಮು ತಾಕತ್ತಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಟ್ವೀಟ್ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಹಾಕಲಾಗಿದೆ.
* ಕೆರೆಗೋಡು ಗ್ರಾಮದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ರಾಷ್ಟ್ರಧ್ವಜ ಹಾಗೂ ನಾಡ ಧ್ವಜ ಹಾರಿಸುವುದಕ್ಕಾಗಿ ಮಾತ್ರ ಧ್ವಜ ಸ್ಥಂಭ ಸ್ಥಾಪನೆಗೆ ಮುಚ್ಚಳಿಕೆ ಬರೆದುಕೊಟ್ಟು ಅನುಮತಿ ಪಡೆದಿದ್ದಾರೆ. ಬರೆದುಕೊಟ್ಟ ಮುಚ್ಚಳಿಕೆಯಂತೆ ಹಾಗೂ ಯಾವುದಕ್ಕೆ ಅನುಮತಿ ಪಡೆದಿದ್ದಾರೋ ಅದನ್ನ ಪಾಲಿಸಬೇಕೇ ಬೇಡವೇ?
* ರಾಷ್ಟ್ರ ಧ್ವಜ ಹಾರಿಸುವ ಉದ್ದೇಶವನ್ನು ಹೈಜಾಕ್ ಮಾಡಿ ಮಂಡ್ಯದಲ್ಲಿ ಶಾಂತಿ ಕದಡಬೇಕು, ಸರ್ಕಾರಕ್ಕೆ ಸವಾಲು ಹಾಕಬೇಕು ಎನ್ನುವುದು ನಿಮ್ಮ ಪೂರ್ವಯೋಜಿತ ಹುನ್ನಾರವಾಗಿತ್ತಲ್ಲವೇ?
* ನಿಮ್ಮ ನಿಷ್ಠೆ ಸಂವಿಧಾನಕ್ಕೋ. ಮನುವಾದಕ್ಕೋ ? ನಿಮ್ಮ ನಿಷ್ಠೆ ದೇಶಕ್ಕೋ, ದೇಶದ್ರೋಹಕ್ಕೋ? ನಿಮ್ಮ ನಿಷ್ಠೆ ರಾಷ್ಟ್ರ ಧ್ವಜಕ್ಕೋ , ಧಾರ್ಮಿಕ ಧ್ವಜಕ್ಕೋ?
ಉತ್ತರ ನೀಡುವ ದಮ್ಮು ತಾಕತ್ತು ಇದೆಯೇ ? ಎಂದು ಅಶೋಕ್ ಅವರನ್ನು ಹಾಗೂ ಕುಮಾರಸ್ವಾಮಿ ಅವರನ್ನು ಟ್ಯಾಗ್ ಮಾಡಲಾಗಿದೆ.