ಡಿಕೆಶಿ-ವಿಜಯೇಂದ್ರದು ಹೊಂದಾಣಿಕೆಯ ರಾಜಕೀಯ : ಶಾಕಿಂಗ್ ಹೇಳಿಕೆ ನೀಡಿದ ಈಶ್ವರಪ್ಪ..!
ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಆ ಕಡೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪಾದಯಾತ್ರೆ ನಡೆಸುತ್ತಿದ್ದರೆ ಈ ಕಡೆ ಮಾಜಿ ಸಚಿವ, ಬಿಜೆಪಿಯಿಂದ ಉಚ್ಚಾಟನೆಗೊಂಡ ಕೆ.ಎಸ್.ಈಶ್ವರಪ್ಪ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ವಿಜಯೇಂದ್ರದು ಹೊಂದಾಣಿಕೆಯ ರಾಜಕೀಯ ಎಂದಿದ್ದಾರೆ. ಈ ಮಾತು ಸದ್ಯ ರಾಜಕೀಯ ವಲಯದಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ನಾನು ಲೋಕಸಭಾ ಚುನಾವಣೆ 2024ಕ್ಕೆ ಸ್ಪರ್ಧೆ ಮಾಡಿದಾಗ ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ್ದೆ. ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆಯ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದೆ. ಇದು ಈಗ ಸಾಕ್ಷಿ ಸಮೇತ ಸಾಬೀತಾಗಿದೆ. ನರೇಂದ್ರ ಮೋದಿ ಅವರು ಹೇಳಿದಂತೆ ಕುಟುಂಬ ರಾಜಕಾರಣದಿಂದ ಹೊರಗೆ ಇರಬೇಕು. ವಿಜಯೇಂದ್ರ, ಡಿಕೆ ಶಿವಕುಮಾರ್ ಅವರಿಗೆ ಟೀಕೆ ಮಾಡಿದಾಗ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬಹಿರಂಗವಾಗಿ ಹೊಂದಾಣಿಕೆ ರಾಜಕಾರಣ ಒಪ್ಪಿಕೊಂಡಿದ್ದಾರೆ. ನಾವೂ ನಿಮಗೆ ಸಹಕಾರ ಕೊಟ್ಟಿಲ್ಲ ಎಂದಾದರೆ ನೀವೂ ಶಾಸಕರೇ ಆಗುತ್ತಿರಲಿಲ್ಲ ಎಂದಿದ್ದರು. ಶಿಕಾರಿಪುರದಲ್ಲಿ ನಾವೂ ಹೊಂದಾಣಿಕೆ ಮಾಡಿಕೊಂಡಿಲ್ಲವೆಂದಾಗಿದ್ದರೆ ನೀವೂ ಶಾಸಕ ಆಗುತ್ತಿರಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಿವಕುಮಾರ್ ಆರೋಪ ಮಾಡಿದರೂ ಕೂಡ ಯಡಿಯೂರಪ್ಪ ಆಗಲೀ, ವಿಜಯೇಂದ್ರ ಆಗಲೀ, ರಾಘವೇಂದ್ರ ಆಗಲೀ ಈ ಬಗ್ಗೆ ಯಾರೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಎಂದಾದರೆ ರಾಜಕೀಯ ಹೊಂದಾಣಿಕೆಯನ್ನು ಒಪ್ಪಿಕೊಂಡಂತೆ ಅಲ್ವಾ. ಇದಕ್ಕಿಂತ ನಾಚಿಕೆಗೇಡು ಮತ್ತೊಂದಿಲ. ನೀವಿಬ್ಬರು ತಕ್ಷಣವೇ ರಾಜ್ಯದ ಜನರ ಕ್ಷಮೆ ಕೋರಬೇಕು. ಜೊಂದಾಣಿಕೆ ರಾಜಕೀಯ ಮಾಡಿಕೊಂಡು ರಾಜ್ಯದ ಜನರ ಧಿಕ್ಕು ತಪ್ಪಿಸುತ್ತಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.