ಅಜ್ಞಾನ ಕಳೆದು ಜ್ಞಾನದ ಬೆಳಕು ಪಸರಿಸುವ ಹಬ್ಬ ದೀಪಾವಳಿ..!
ಇಂದಿನಿಂದ ನಾಡಿನೆಲ್ಲೆಡೆ ದೀಪಾವಳಿಯ ಹಬ್ಬ ಶುರುವಾಗಿದೆ. ಕೆಲವೆಡೆ ವಾರಾನುಗಟ್ಟಲೆಯಿಂದಾನೇ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಇದು ಬೆಳಕುಗಳ ಹಬ್ಬ. ಎಷ್ಟೋ ಜನರ ಬದುಕಲ್ಲಿ ಕತ್ತಲೆ ಸರಿದು, ಬೆಳಕನ್ನು ತೋರೊಸುವ ಹಬ್ಬ. ಸಂತೋಷ ಮತ್ತು ಸಮೃದ್ದಿಯ ಹಬ್ಬ. ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಈ ಹಬ್ಬಕ್ಕೆ ಪುರಾಣಗಳ ಹಿನ್ನಲೆಯೂ ಇದೆ. ಶ್ರೀರಾಮನು 14 ವರ್ಷಗಳ ವನವಾಸ ಮುಗಿಸಿ ನಾಡಿಗೆ ವಾಪಸ್ ಬರುವಾಗ ಅಯೋಧ್ಯೆಯ ಜನರು ಇಡೀ ಊರಿಗೆ ದೀಪ ಹಚ್ಚಿದ್ದರು. ಶ್ರೀರಾಮನ ಆಗಮನವನ್ನು ಸಂಭ್ರಮಿಸಿದ ದಿನವೇ ದೀಪಾವಳಿ ಆಚರಣೆಯಾಯಿತು. ಇದು ಅಂದಿನಿಂದಲೂ ನಡೆದುಕೊಂಡ ಬಂದ ಪ್ರತೀತಿಯಾಗಿದೆ. ಈ ಹಬ್ಬದಲ್ಲಿ ಅಸುರರನ್ನು ಶಿಕ್ಷಿಸಿದ ನಂಬಿಕೆಯೂ ಇದೆ.
ಬೆಳಕು ಎಂಬುದು ಜ್ಞಾನಗಳ ಪ್ರತೀಕವಾಗಿದೆ. ಮೂರು ದಿನಗಳ ಕಾಲ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ನೀರು ತುಂಬುವ ಹಬ್ಬ, ನರಕ ಚತುರ್ದಶಿ ಅಮಾವಾಸ್ಯೆ, ಬಲಿಪಾಡ್ಯಮಿ ಪೂಜೆಯನ್ನು ಮಾಡಲಾಗುತ್ತದೆ. ವಾರಗಳ ಮೊದಲೇ ಜನರು ಮನೆಗಳು, ಕಚೇರಿಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಯಾಕಂದ್ರೆ ಈ ಹಬ್ಬದಲ್ಲಿ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಿಗೆ ಅಲಂಕಾರ ಮಾಡಿ, ಲಕ್ಷ್ಮೀಯನ್ನು ಕೂರಿಸಿ ಪೂಜೆ ಮಾಡುತ್ತಾರೆ. ಮನೆ, ಮನಗಳು ಸ್ವಚ್ಛವಾಗಿದ್ದರೆ ಲಕ್ಷ್ಮೀ ದೇವಿ ಒಳಗೆ ಬರುತ್ತಾಳೆ ಎಂಬ ನಂಬಿಕೆ. ಗ್ರಾಮೀಣ ಭಾಗದಲ್ಲಿ ಹಸುಗಳಿಗೂ ಅಲಂಕಾರ ಮಾಡುತ್ತಾರೆ. ಲಕ್ಷ್ಮೀ ಪೂಜೆಯ ಜೊತೆಗೆ ಗೋ ಪೂಜೆಯನ್ನು ಮಾಡುತ್ತಾರೆ. ಜೊತೆಗೆ ಪಟಾಕಿಯನ್ನು ಹೊಡೆಯುತ್ತಾರೆ. ಪರಿಸರ ಕಾಳಜಿ ಇರುವವರು ಹೆಚ್ಚು ಪಟಾಕಿ ಹೊಡೆಯುವುದಕ್ಕೆ ಹೋಗಲ್ಲ. ಪ್ರಾಣಿ ಪ್ರಿಯರು ಕೂಡ ಪಟಾಕಿಗಳಿಂದ ದೂರ. ಪಟಾಕಿ ಹೊಡೆಯುವಾಗ ತುಂಬಾ ಕೇರ್ ಫುಲ್ ಆಗಿರಿ.