ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಒಪ್ಪಿಕೊಂಡ್ರಾ..? ಬಿಜೆಪಿ ಆ ಕಂಡೀಷನ್ ಗೆ ಓಕೆ ಅಂದ್ರಾ..?
ಮೂಡಾ ಹಾಗೂ ವಾಲ್ಮೀಕಿ ಹರಗರಣವನ್ನು ವಿರೋಧಿಸಿ ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆ ಹೊರಟಿದ್ದಾರೆ. ಆದರೆ ಈ ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು. ಜೆಡಿಎಸ್ ಬೆಂಬಲ ನೀಡದೆ ಹೋದರು ಪಾದಯಾತ್ರೆಯನ್ನು ಮುಂದುವರೆಸಿ ಎಂದು ಅಮಿತ್ ಶಾ ಸಲಹೆ ನೀಡಿದ್ದರು. ಆದರೆ ಇದೀಗ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿದ್ದಾರೆ, ಪಾದಯಾತ್ರೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಧಾನ ಮಾಡಿದ್ದು, ಪಾದಯಾತ್ರೆಗೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ. ಇದರ ನಡುವೆ ಒಂದು ಷರತ್ತನ್ನು ವಿಧಿಸಿದ್ದಾರೆ ಎನ್ನಲಾಗಿದೆ. ಆ ಷರತ್ತು ಒಪ್ಪಿದರೆ ಮಾತ್ರ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರಂತೆ. ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರು ಪಾದಯಾತ್ರೆಗೆ ಬಾರದೆ ಇದ್ದರೆ ಮಾತ್ರ ನಾನು ಬರುತ್ತೇನೆ ಎಂದಿದ್ದಾರಂತೆ. ಈ ಬಗ್ಗೆ ಬಿಜೆಪಿ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಕುಮಾರಸ್ವಾಮಿ ಅವರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಈ ಬಗ್ಗೆ ಮಾತನಾಡಿ, ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ವಾಲ್ಮೀಕಿ ಹಾಗೂ ಮೂಡಾ ಹಗರಣದಲ್ಲಿ ಬಾರಿ ಭ್ರಷ್ಟಾಚಾರ ಆಗಿದೆ. ಸಿಎಂ ಕುಟುಂಬಸ್ಥರಿಗೆ 14 ಮೂಡಾ ಸೈಟುಗಳು ಬಂದಿವೆ. ಅಷ್ಟೇ ಅಲ್ಲ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ನಾಯಕರು 4 ಸಾವಿರ ಕೋಟಿ ಮೌಲ್ಯದ ಸೈಟುಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಬಡವರಿಗೆ ಅನ್ಯಾಯವಾಗಿದೆ. ಇದಕ್ಕೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.