ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಬಗ್ಗೆ ಅಸಮಾಧಾನ ಹೊರ ಹಾಕಿದರಾ ಸಿಟಿ ರವಿ...? ವಿಜಯೇಂದ್ರ ಬಗ್ಗೆ ಹೇಳಿದ್ದೇನು..?
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿನ್ನೆಯಷ್ಟೇ ಹೊಸ ನೇಮಕವಾಗಿದೆ. ಯಡಿಯೂರಪ್ಪ ಅವರ ಪುತ್ರನ ನೇಮಕದಿಂದಾಗಿ ಹಲವಾರು ಮಂದಿ ಖುಷಿಯಾಗಿದ್ದಾರೆ. ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ. ಇದರ ನಡುವೆ ಹಲವರಿಗೆ ಬೇಸರವೂ ಆಗಿದೆ. ಅದರಲ್ಲಿ ಸಿಟಿ ರವಿ ಕೂಡ ಒಬ್ಬರು. ಬಿವೈ ವಿಜಯೇಂದ್ರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ಕೆಂಪೇಗೌಡ ಇಂಟರ್ ನ್ಯಾಶನಲ್ ಏರ್ಪೋರ್ಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಅವರು, ವಿಜಯೇಂದ್ರ ಅವರನ್ನು ಪಕ್ಷ ನೇಮಕ ಮಾಡಿದೆ. ವೈಚಾರಿಕ ಭದ್ರತೆಯ ಜೊತೆಗೆ ಪಕ್ಷ ಕಟ್ಟಿ ಬೆಳೆಸುವ ಕೆಲಸವನ್ನು ಅವರು ಮಾಡಬೇಕಿದೆ ಪ್ರಮುಖವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಅವರ ಮೇಲಿದೆ. ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ.
ಅಸಮಾಧಾನದ ಬಗ್ಗೆ ನಾನು ಈಗ ಏನು ಮಾತನಾಡಲ್ಲ. 35 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರೆಗೂ ಕಾರ್ಯ ನಿರ್ವಹಿಸಿದ್ದೀನಿ. ಈಗ ನಾನು ಏನು ಮಾತನಾಡಲ್ಲ. ಈಗಾಗಲೇ ಬಹಳ ಮಾತನಾಡಿದ್ದೇನೆ. ಈಗ ನಾನೇನಾದರೂ ಮಾತನಾಡಿದರೆ, ನಮ್ಮ ಮಾತೆ ನಮಗೆ ತಿರುಗು ಬಾಣವಾಗುತ್ತದೆ ಎಂದಿದ್ದಾರೆ. ಈ ಮೂಲಕ ವಿಜಯೇಂದ್ರ ಅವರ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.