ದೇವೇಗೌಡರನ್ನು ಭೇಟಿಯಾದ ಮಠಾಧೀಶರು ಹೇಳಿದ್ದೇನು..?
ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ ಉಳಿದುಕೊಂಡಿದ್ದಾರೆ. ಇದೆಲ್ಲವನ್ನು ಕೇಳಿ ಮಾಜಿ ಪ್ರಧಾನಿ ದೇವೇಗೌಡರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಪ್ರಧಾನಿಗಳಾಗಿದ್ದವರು, ದೇಶ ಸೇವೆ ಮಾಡಿದವರು. ಹಾಸನ, ತುಮಕೂರಿಗೆ ಇವರ ಸೇವೆ ಅಪಾರವಾದದ್ದು. ದೇವೇಗೌಡರ ಜೀವನ ಸ್ಪೂರ್ತಿದಾಯಕವಾದದ್ದು. ಆದರೆ ಮಗ-ಮೊಮ್ಮಗ ಇಂಥ ಕೆಲಸ ಮಾಡಿದರೆ ಆ ಜೀವ ತಡೆದುಕೊಳ್ಳುವುದಾದರು ಹೇಗೆ. ಹೀಗಾಗಿ ನೊಂದಿರುವ ದೇವೇಗೌಡರನ್ನು ಮಠಾಧೀಶರು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ, ಸಮಾಧಾನದ ಮಾತುಗಳನ್ನಾಡಿದ್ದಾರೆ.
ಪದ್ಮನಾಭನಗರದ ನಿವಾಸಕ್ಕೆ ತೆರಳಿದ ಛಲವಾದಿ ಗುರುಪೀಠದ ಬಸವನಾಗಿದೇವ ಶ್ರೀ, ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರು ದೇವೇಗೌಡರನ್ನು ಭೇಟಿಯಾಗಿದ್ದಾರೆ. ಈ ವೇಳೆ ದೇವೇಗೌಡರ ಹಣೆಗೆ ತಿಲಕವಿಟ್ಟು, ಹಾರೈಸಿದ್ದಾರೆ. ಘಟನೆಯ ಬಗ್ಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಿ, ಅವರಿಗೆ ಸಮಾಧಾನ ಹೇಳಿದ್ದಾರೆ. ಈ ವಯಸ್ಸಲ್ಲಿ ಇಂಥ ಸುದ್ದಿ ಬಂತಲ್ಲ ಅಂತ ದೇವೇಗೌಡರು ಬೇಸರ ಮಾಡಿಕೊಂಡಿರುವುದಂತು ಸತ್ಯ. ಇನ್ನು ಕಲಬುರಗಿಯ ಪುಣ್ಯಕೋಟಿ ಆಶ್ರಮದ ವರಲಿಂಗ ಸ್ವಾಮೀಜಿಗಳು ಸಹ ಭೇಟಿಗೆ ಬಂದಿದ್ದಾರೆ. ಆದರೆ ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಸುದ್ದಿಯಾಗುತ್ತಲೇ ವಿದೇಶಕ್ಕೆ ತೆರಳಿದ್ದಾರೆ. ಈಗಾಗಲೇ ಅವರಿಗೆ ಎಸ್ಐಟಿ ಅಧಿಕಾರಿಗಳು ಸಾಕಷ್ಟು ನೋಟೀಸ್ ಕೂಡ ನೀಡಿದ್ದಾರೆ. ಆದರೆ ಯಾವುದಕ್ಕೂ ರೆಸ್ಪಾನ್ಸ್ ಇಲ್ಲ. ಅವರ ರಿಟರ್ನ್ ಟಿಕೆಟ್ ಬುಕ್ ಆಗಿದ್ದನ್ನು ನೋಡಿದರೆ ಇಷ್ಟೊತ್ತಿಗಾಗಲೇ ಹಾಸನಕ್ಕೆ ವಾಪಾಸ್ ಆಗಬೇಕಿತ್ತು. ಅದನ್ನು ಕ್ಯಾನ್ಸಲ್ ಮಾಡಿಕೊಂಡು ವಿದೇಶದಲ್ಲಿಯೇ ಉಳಿದಿದ್ದಾರೆ. ಇತ್ತ ಹೆಚ್. ಡಿ. ರೇವಣ್ಣ ಅವರ ವಿಚಾರಣೆ ನಡೆಯುತ್ತಿದೆ.