ಪ್ರಜ್ವಲ್ ರೇವಣ್ಣನಿಗೆ ಕಡೆಯ ಎಚ್ಚರಿಕೆ ಕೊಟ್ಟ ದೇವೇಗೌಡ್ರು : ಶರಣಾಗುವಂತೆ ಪತ್ರ..!
ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಷನ್ ಮುಗಿದ ಮಾರನೇ ದಿನ ಎಸ್ಕೇಪ್ ಆಗಿರುವ ಪ್ರಜ್ವಲ್ ರೇವಣ್ಣ ಇನ್ನು ದೇಶಕ್ಕೆ ವಾಪಾಸ್ ಆಗಿಲ್ಲ. ಎಸ್ಐಟಿ ಅಧಿಕಾರಿಗಳು ಹಲವು ಬಾರಿ ನೋಟೀಸ್ ನೀಡಿದ್ದಾರೆ. ಕೋರ್ಟ್ ಕೂಡ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಆದರೂ ಪ್ರಜ್ವಲ್ ರೇವಣ್ಣ ಸುಳಿವು ಇಲ್ಲ. ಇದೀಗ ಹೆಚ್.ಡಿ. ದೇವೇಗೌಡ್ರು ಮೊಮ್ಮಗನಿಗೆ ಕಡೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರಜ್ವಲ್ ರೇವಣ್ಣರಿಗೆ ಬಹಿರಂಗ ಪತ್ರ ಬರೆದಿರುವ ದೇವೇಗೌಡ್ರು, ನಾನು ಮೇ 18ನೇ ತಾರೀಕು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಸ್ನೇಹಿತರಿಗೆ, ಕುಟುಂಬಸ್ಥರಿಗೆ, ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರ ಬಂದು ಮಾತನಾಡುವುದಕ್ಕೆ ಸ್ವಲ್ಪ ಸಮಯವಿಡಿಯಿತು. ನಾನು ಈಗಾಗಲೇ ಸ್ಪಷ್ಟ ಪಡಿಸಿರುವ ಹಾಗೇ ಅವನು ತಪ್ಪಿತಸ್ಥನಾದರೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಈ ನಿಲುವನ್ನು ನನ್ನ ಮಗ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಗರಣ ಹೊರಬಿದ್ದ ಮೊದಲ ದಿನದಿಂದಾನೇ ಪ್ರತಿಪಾದಿಸಿದ್ದಾರೆ. ಕೆಲವು ವಾರದಿಂದ ನನ್ನ ಹಾಗೂ ಕುಟುಂಬದ ಬಗ್ಗೆ ಜನ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡಲ್ಲ. ಅವರನ್ನು ಟೀಕೆ ಮಾಡುವುದಕ್ಕೂ ಹೋಗಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರ ಬರುವವರೆಗೂ ಕಾಯುತ್ತೇನೆ.
ಎಲ್ಲಿದ್ದರೂ ಕೂಡಲೇ ವಾಪಸ್ ಬರಬೇಕು. ಪ್ರಜ್ವಲ್ ಎಲ್ಲಿದ್ದರು ಬಂದು ಪೊಲೀಸರ ಮುಂದೆ ಶರಣಾಗಬೇಕು. ವಿಚಾರಣೆಯನ್ನು ಎದುರಿಸಬೇಕು. ಯವುದೇ ಮುಲಜು, ಮರ್ಜಿ ಇಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.