ಅಯೋಧ್ಯೆಗೆ ಕುಟುಂಬ ಸಮೇತ ಹೊರಟ ದೇವೇಗೌಡರ ಕುಟುಂಬ
ಬೆಂಗಳೂರು: ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಸುಂದರವಾದ ಘಳಿಗೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ದೊಡ್ಡಗೌಡರ ಕುಟುಂಬ ಅಯೋಧ್ಯೆಗೆ ಪಯಣ ಬೆಳೆಸಿದ್ದಾರೆ. ಕುಟಂಬ ಸಮೇತ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ತೆರಳಿದ್ದಾರೆ.
ದೇವೇಗೌಡರು, ಅವರ ಪತ್ನಿ ಚನ್ನಮ್ಮ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ಅಯೋಧ್ಯೆಗೆ ವಿಮಾನದಲ್ಲಿ ತೆರಳಿದ್ದಾರೆ. ದೊಡ್ಡಗೌಡರ ಕುಟುಂಬಕ್ಕೂ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುವುದಕ್ಕೆ ಆಹ್ವಾನ ಬಂದಿತ್ತು. ಕುಟುಂಬ ಸಮೇತ ಪೂಜೆಗೆ ಹಾಜರಾಗುತ್ತೀವಿ ಎಂದು ಹೇಳಿದ್ದ ಗೌಡರು, ಇಂದು ಅಯೋಧ್ಯೆಗೆ ಹೊರಟಿದ್ದಾರೆ.
ವಿಮಾನ ಹತ್ತುವ ಮೊದಲು ಮಾತನಾಡಿದ ದೇವೇಗೌಡರು, ಅಯೋಧ್ಯೆಯಲ್ಲಿ ನಡೆಯೋ ರಾಮಲಲ್ಲಾ ಮೂರ್ತಿ ಉದ್ಘಾಟನೆಗೆ ಕಾಶ್ಮೀರದ ಮುಸ್ಲಿಂರು ಹೂವುಗಳನ್ನು ಕಳುಹಿಸಿದ್ದಾರೆ. ಪಶ್ಚಿಮ ಬಂಗಾಳದ ಜನ ಕೂಡ ಹೂಗಳನ್ನು ಕಳುಹಿಸಿದ್ದಾರೆ. ಅನೇಕ ರಾಜ್ಯಗಳಿಂದ ಅಯೋಧ್ಯೆಗೆ ಅನೇಕ ಉಡುಗೊರೆಗಳು ಬಂದಿವೆ. ಹಿಂದೂಗಳು ಬಿಡಿ, ಮುಸ್ಲಿಮರೇ ಹೂವಿನ ಮಳೆ ಸುರಿಸುತ್ತಿದ್ದಾರೆ. ಎಲ್ಲರೂ ಎಲ್ಲದನ್ನೂ ಅರ್ಥ ಮಾಡಿಕೊಳ್ಳಬೇಕು. ಯಾರಿಗೆ ಯಾರೂ ಪ್ರೇರಣೆ ಮಾಡಲ್ಲ ಎಂದಿದ್ದಾರೆ.
ನಾಳೆ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ದಿನಕ್ಕೋಸ್ಕರ ಇಡೀ ವಿಶ್ವದ ಹಿಂದೂಗಳು ಕಾಯುತ್ತಿದ್ದರು. ಈ ಗಳಿಗೆಯನ್ನು ನಾಳೆ ಎಲ್ಲಾ ಚಾನೆಲ್ ಗಳು ನೇರ ಪ್ರಸಾರ ಮಾಡಲಿದ್ದು, ಅಯೋಧ್ಯೆಯಲ್ಲಿ ಏನೆಲ್ಲಾ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ಜನ ಮನೆಯಿಂದಾನೇ ಕಣ್ತುಂಬಿಕೊಳ್ಳಬಹುದು. ರಾಮನ ಭಕ್ತಿಗೆ ಒಳಗಾಗಬಹುದು. ಸಾಧ್ಯವಾದವರು ಅಯೋಧ್ಯೆಗೆ ತೆರಳಿ, ಪೂಜೆ ಸಲ್ಲಿಸಲಿದ್ದಾರೆ. ಈಗಾಗಲೇ ಕರ್ನಾಟಕದಿಂದ ಅಯೋಧ್ಯೆಗೆ ನೇರ ರೈಲುಗಳನ್ನು ಬಿಡಲಾಗಿದೆ. ಮೈಸೂರಿನಿಂದ ಕೂಡ ರೈಲು ಇದೆ ಎಂಬುದನ್ನು ಸಂಸದ ಪ್ರತಾಪ್ ಸಿಂಹ ಮೊದಲೇ ಮಾಹಿತಿ ನೀಡಿದ್ದಾರೆ.